Advertisement

ಹಿರಿಯೂರು ನಗರಸಭೆಯಲ್ಲಿ ಮೈತ್ರಿ ಮೇಲುಗೈ

11:58 AM Jun 01, 2019 | Naveen |

ಚಿತ್ರದುರ್ಗ: ತೀವ್ರ ಕುತೂಹಲ ಮೂಡಿಸಿದ್ದ ಹಿರಿಯೂರು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷಗಳು ಸರಳ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.

Advertisement

ಕಾಂಗ್ರೆಸ್‌ 13, ಜೆಡಿಎಸ್‌-3, ಬಿಜೆಪಿ-6 ಹಾಗೂ ಪಕ್ಷೇತರರು ಒಟ್ಟು 9 ಸದಸ್ಯರು ಆಯ್ಕೆಯಾಗಿದ್ದಾರೆ. ಹಿರಿಯೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯರಿದ್ದು ಕಾಂಗ್ರೆಸ್‌ 13ರಲ್ಲಿ ಜಯಭೇರಿ ಬಾರಿಸಿದರೆ, ಮೈತ್ರಿ ಜೆಡಿಎಸ್‌ ಕೇವಲ 3 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಅಲ್ಲದೆ ದಿನೇ ದಿನೇ ಜೆಡಿಎಸ್‌ ವರ್ಚಸ್ಸು ಕುಗ್ಗುತ್ತಿರುವುದು ಕಾರ್ಯಕರ್ತರಲ್ಲಿ ಆತಂಕ ಸೃಷ್ಠಿಸಿದೆ.

ಬಿಜೆಪಿಗೆ ಸಮಾಧಾನ: ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರಿಗೆ ನಗರಸಭೆ ಚುನಾವಣೆಯಲ್ಲಿ ಮುಖಭಂಗವಾಗಿದ್ದರೂ ನಗರಸಭೆ ಇತಿಹಾಸದಲ್ಲೇ ಬಿಜೆಪಿ 6 ಸ್ಥಾನಗಳನ್ನು ಗೆಲ್ಲುವ ಮೂಲಕ ಖಾತೆ ತೆರೆದಿರುವುದು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೊಂಚ ಸಮಾಧಾನ ತಂದಿದೆ. ಲೋಕಸಭಾ ಚುನಾವಣೆಯಲ್ಲಿ ಹಿರಿಯೂರು ಕ್ಷೇತ್ರವು ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡಿತ್ತು. ಆದರೆ ನಗರಸಭೆ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚುವ ಮೂಲಕ ಕಾರ್ಯಕರ್ತರಲ್ಲಿ ನಡುಕ ಆರಂಭವಾಗಿದೆ.

ಪಕ್ಷೇತರರ ಪಾರುಪತ್ಯ: ಪಕ್ಷೇತರರು 9 ಮಂದಿ ಆಯ್ಕೆಯಾಗುವ ಮೂಲಕ ಪಾರುಪತ್ಯ ಮೆರೆದಿದ್ದಾರೆ. ಕಳೆದ ಮೇ 29 ರಂದು ಹಿರಿಯೂರು ನಗರಸಭೆಗೆ ತುರುಸಿನ ಚುನಾವಣೆ ನಡೆದಿತ್ತು. ಹೇಗಾದರೂ ಮಾಡಿ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿ ಅಕ್ಷರಶಃ ಮುಖಭಂಗವಾಗಿದೆ.

ಹಾಲಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರೇ ಬಹುತೇಕ ವಾರ್ಡ್‌ಗಳಲ್ಲಿ ಮಿಂಚಿನ ಸಂಚಾರ ಮಾಡಿ ಭರ್ಜರಿ ಮತ ಪ್ರಚಾರ ನಡೆಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯ ಫಲಿತಾಂಶ ಮುಂದಿಟ್ಟು ಹಾಗೂ ಮೋದಿ ಹೆಸರೇಳಿ ಮತ ಭಿಕ್ಷೆ ಕೋರಿದ್ದರು. ಶಾಸಕಿ ಚುನಾವಣೆಯ ನೇತೃತ್ವ ವಹಿಸಿದ್ದು ಮತದಾರರು ಸಂಪೂರ್ಣ ತಿರಸ್ಕರಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ನೂತನ ಸಂಸದರು ಗಳಿಸಿದ ಮತಗಳ ತುಲನೆ ಮಾಡಿದರೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಕಳಪೆ ಸಾಧನೆ ಮಾಡಿದೆ. ಇದು ಬಿಜೆಪಿ ನಾಯಕರು ಮತ್ತು ಹಾಲಿ ಶಾಸಕರಿಗೆ ಎಚ್ಚರಿಕೆ ಗಂಟೆಯಾಗಿದೆ.

Advertisement

ನೆಲ ಕಚ್ಚಿದ ಜೆಡಿಎಸ್‌: ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷಕ್ಕೆ ತನ್ನದೇ ಆದ ನೆಲೆ ಇದೆ. ಜಿಲ್ಲಾಧ್ಯಕ್ಷ ಡಿ.ಯಶೋಧರ ಹಿರಿಯೂರು ನಿವಾಸಿ, 2ನೇ ನಾಯಕ ಎಂ.ಜಯಣ್ಣ ಕೂಡ ಹಿರಿಯೂರು ನಿವಾಸಿ. ಆದರೂ ಜೆಡಿಎಸ್‌ ಕೇವಲ 3 ಸ್ಥಾನದಲ್ಲಿ ಗೆದ್ದಿರುವುದು ಆ ಮುಖಂಡರಿಗೆ ರಾಜಕೀಯವಾಗಿ ದೊಡ್ಡ ಪೆಟ್ಟನ್ನು ಮತದಾರರು ನೀಡಿದ್ದಾರೆ.

ಕೈ-ತೆನೆ ಮೈತ್ರಿ: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಾಲುದಾರ ಪಕ್ಷವಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. 31 ಸ್ಥಾನಗಳಲ್ಲಿ ಜೆಡಿಎಸ್‌ ಪಕ್ಷಕ್ಕೆ 9 ಸೀಟು ಹಂಚಿಕೆ ಮಾಡಲಾಗಿತ್ತು. 9 ವಾರ್ಡ್‌ ಗಳಲ್ಲಿ 1 ಅವಿರೋಧ ಆಯ್ಕೆಯಾಗಿತ್ತು. ಉಳಿದ 8 ವಾರ್ಡ್‌ ಗಳಲ್ಲಿ 2 ಸೀಟು ಗೆಲ್ಲುವ ಮೂಲಕ ತೀರಾ ಕಳಪೆ ಸಾಧನೆ ಮಾಡಿದೆ.

ಕಾಂಗ್ರೆಸ್‌ 22 ವಾರ್ಡ್‌ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. 22ರಲ್ಲಿ 13 ಸೀಟು ಗೆಲ್ಲುವ ಮೂಲಕ ಮಾನ ಉಳಿಸಿಕೊಂಡಿದೆ. ಉಳಿದ ವಾರ್ಡ್‌ಗಳಲ್ಲಿ ಮಾಜಿ ಶಾಸಕ ಡಿ.ಸುಧಾಕರ್‌ ಅವರಿಗೆ ಸಡ್ಡೊಡೆದು ಬಂಡಾಯವೆದ್ದು ಪಕ್ಷೇತರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ.

ಸೋತ ಘಟಾನುಘಟಿಗಳು: ಜಿದ್ದಾಜಿದ್ದಿ ನಗರಸಭೆ ಚುನಾವಣೆಯಲ್ಲಿ ಘಟಾನುಘಟಿ ಸ್ಥಳೀಯ ಮುಖಂಡರು ಸೋತು ಸುಣ್ಣವಾಗಿದ್ದಾರೆ. ಬಿಜೆಪಿಯ ಬೆಂಬಲಿತ ಮಾಜಿ ನಗರಸಭಾಧ್ಯಕ್ಷೆ ಮಂಜುಳಾ, ಮಾಜಿ ಪುರಸಭಾ ಉಪಾಧ್ಯಕ್ಷ ರವಿಚಂದ್ರನಾಯ್ಕ, ಶಾಸಕರ ಪರಮಾಪ್ತ ನಿಕಟಪೂರ್ವ ನಗರಸಭಾ ಸದಸ್ಯ ಪ್ರೇಮ್‌ ಕುಮಾರ್‌ ಪರಾಭವಗೊಂಡಿದ್ದಾರೆ.

ಹೆಚ್ಚು ಲೀಡ್‌ ಪಡೆದ ಯುವಕ: ನಗರಸಭಾ ಚುನಾವಣೆಯಲ್ಲಿ ಹರಿಯಬ್ಬೆ ಗ್ರಾಮದ ಮೂಲ ನಿವಾಸಿ ಎಚ್.ಎಂ. ಗುಂಡೇಶ್‌ 5 ವಾರ್ಡ್‌ನಲ್ಲಿ ಸ್ಪರ್ಧಿಸಿ ಬಿಜೆಪಿಯ ಅಭ್ಯರ್ಥಿ ವಿರುದ್ಧ 349 ಮತಗಳ ಲೀಡ್‌ ಪಡೆದು ಆಯ್ಕೆಯಾಗಿರುವುದು ಈ ಸಲದ ಚುನಾವಣೆಯ ದಾಖಲೆ ಲೀಡ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next