Advertisement

ವಿವಿ ಸಾಗರ ರಕ್ಷಣೆಗೆ ಹೋರಾಟ ಶುರು

11:51 AM Jun 30, 2019 | Naveen |

ಹಿರಿಯೂರು: ವಿವಿ ಸಾಗರದ ಡೆಡ್‌ ಸ್ಟೋರೇಜ್‌ ನೀರು ಉಳಿಸಿ ವಾಣಿವಿಲಾಸ ಸಾಗರ ಅಣೆಕಟ್ಟು ರಕ್ಷಿಸುವಂತೆ ಒತ್ತಾಯಿಸಿ ವಿವಿ ಸಾಗರ ಹೋರಾಟ ಸಮಿತಿ ವತಿಯಿಂದ ನಗರದ ನೆಹರು ಮಾರುಕಟ್ಟೆ ಆವರಣದಲ್ಲಿ ಶನಿವಾರ ತಾಲೂಕಿನ ರೈತರ ಬೃಹತ್‌ ಸಮಾವೇಶ ನಡೆಯಿತು.

Advertisement

ರೈತ ಮುಖಂಡ ಆರನಕಟ್ಟೆ ಶಿವಕುಮಾರ್‌ ಮಾತನಾಡಿ, ಮೈಸೂರು ಮಹಾರಾಜರ ದೂರದೃಷ್ಟಿಯ ಫಲವಾಗಿ ವಿವಿ ಸಾಗರ ಅಣೆಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಆದರೆ ಜನಪ್ರತಿನಿಧಿಗಳು ಮತ್ತು

ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿವಿ ಸಾಗರ ಅಣೆಕಟ್ಟೆಯಲ್ಲಿ ನೀರಿಲ್ಲದೆ ಡೆಡ್‌ ಸ್ಟೋರೇಜ್‌ ಹಂತ ತಲುಪಿದೆ. ಈ ನೀರನ್ನು ಬಳಕೆ ಮಾಡುವುದು ತುಂಬಾ ಅಪಾಯಕಾರಿ. ಹಾಗಾಗಿ ಅಣೆಕಟ್ಟೆ ರಕ್ಷಣೆ ಕೆಲಸ ತುರ್ತಾಗಿ ಆಗಬೇಕು. ಅಣೆಕಟ್ಟೆಯಲ್ಲಿ ಕೇವಲ 60 ಅಡಿ ನೀರು ಇದ್ದು, ಆ ನೀರನ್ನು ಉಳಿಸಿದರೆ ಮಾತ್ರ ಅಣೆಕಟ್ಟು ಮತ್ತು ಜಲಚರಗಳು ಉಳಿಯುತ್ತವೆ. ಆದ್ದರಿಂದ ಅಣೆಕಟ್ಟೆಯಿಂದ ನೀರನ್ನು ಪಂಪ್‌ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

100 ವರ್ಷದಲ್ಲಿ 75 ವರ್ಷ ಬರಗಾಲವನ್ನು ಅನುಭವಿಸುತ್ತಿರುವ ಈ ಭಾಗದ ರೈತರ ಕನಸು ನನಸಾಗಲು ಆದಷ್ಟು ಬೇಗ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿ ವಿವಿ ಸಾಗರಕ್ಕೆ ನೀರು ಹರಿಸಬೇಕು. ಈ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಜನನಾಯಕರು ಪಕ್ಷಾತೀತವಾಗಿ ಜಿಲ್ಲೆ ಹಾಗೂ ತಾಲೂಕಿನ ರೈತರ ಹಿತ ಕಾಪಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದರು.

ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಮಾತನಾಡಿ, ತಾಲೂಕಿನಲ್ಲಿ ಮಳೆ ಇಲ್ಲದೆ ವಿವಿ ಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಮೈಸೂರು ಮಹಾರಾಜರು ಈ ಭಾಗದ ರೈತರ ಹಿತಕ್ಕಾಗಿ ಒಡವೆಗಳನ್ನು ಅಡವಿಟ್ಟು ಅಣೆಕಟ್ಟೆ ನಿರ್ಮಾಣ ಮಾಡಿದ್ದಾರೆ. ಮುಂದಿನ ತಲೆಮಾರಿಗೆ ಈ ಅಣೆಕಟ್ಟೆಯನ್ನು ಉಳಿಸಬೇಕಾಗಿದೆ ಎಂದು ಹೇಳಿದರು.

Advertisement

ಹೋಮ- ಹವನದಂತಹ ಧಾರ್ಮಿಕ ಕಾರ್ಯ ಮಾಡಿದರೂ ಮಳೆಯಾಗುತ್ತಿಲ್ಲ. ಇದು ಹೋಮ- ಹವನದಿಂದ ಆಗುವಂತಹ ಕೆಲಸ ಅಲ್ಲ. ಸರ್ಕಾರ ಮತ್ತು ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕು. ಅದಕ್ಕಾಗಿ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ವಿವಿ ಸಾಗರಕ್ಕೆ ನೀರು ಹರಿಸಬೇಕು ಎಂದು ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್‌ ಅವರಲ್ಲಿ ಮನವಿ ಮಾಡಿದರು.

ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಜಿಲ್ಲೆಯಾದ್ಯಂತ ನೀರಿನ ಹಾಹಾಕಾರವಿದೆ.

ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದಿದ್ದೇನೆ. ಸರ್ಕಾರದ ಮೇಲೆ ಈ ಭಾಗದ ಎಲ್ಲ ಜನಪ್ರತಿನಿಧಿಗಳೂ ಪಕ್ಷಾತೀತವಾಗಿ ಒತ್ತಡ ಹೇರಬೇಕು. ಸರ್ಕಾರ ಈ ಭಾಗದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ವಿವಿ ಸಾಗರಕ್ಕೆ ಕೇವಲ ಎರಡು ಟಿಎಂಸಿ ನೀರು ಸಾಲದು, ಇನ್ನೂ ಹೆಚ್ಚಿನ ನೀರಿನ ಅಗತ್ಯವಿದೆ ಎಂದರು.

ಕಳೆದ 35 ವರ್ಷದಿಂದ ಸ್ಥಗಿತಗೊಂಡಿರುವ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಬೇಕು. ಅದರಿಂದ ಸಾವಿರಾರು ಜನರಿಗೆ ಉದ್ಯೋಗ ದೊರೆಯುವಂತಾಗಬೇಕು. ಸರ್ಕಾರದ ಕಣ್ಣು ತೆರೆಸಲು ದೊಡ್ಡ ಮಟ್ಟದ ಸಂಘಟನೆ ಮತ್ತು ಹೋರಾಟದ ಅಗತ್ಯವಿದೆ ಎಂದು ತಿಳಿಸಿದರು.

ರೈತ ಮಹಿಳೆ ವೇದಾ ಶಿವಕುಮಾರ್‌ ಸಮಾವೇಶವನ್ನು ಉದ್ಘಾಟಿಸಿದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಮಾಜಿ ಸಚಿವ ಡಿ. ಸುಧಾಕರ್‌ ಮಾತನಾಡಿದರು. ರೈತ ಮುಖಂಡ ಕಸುವನಹಳ್ಳಿ ರಮೇಶ್‌ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಸಿ. ಹೊರಕೇರಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್‌. ತಿಮ್ಮಯ್ಯ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ. ಯಶೋಧರ, ಜಿಪಂ ಮಾಜಿ ಅಧ್ಯಕ್ಷ ಬಿ.ಎಸ್‌. ರಘುನಾಥ್‌, ಭದ್ರಾ ಮೇಲ್ದಂಡೆ ಯೋಜನೆ ಇಂಜಿನಿಯರ್‌ ಶಿವಕುಮಾರ್‌, ಮುಖ್ಯ ಇಂಜಿನಿಯರ್‌ ಜಯಪ್ರಕಾಶ್‌, ನಿವೃತ್ತ ಇಂಜಿನಿಯರ್‌ ಜಗನ್ನಾಥ, ಮುಖಂಡರಾದ ಆರ್‌. ಮಂಜುನಾಥ್‌, ಆದಿವಾಲ ತ್ರಯಂಬಕಮೂರ್ತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next