ಹಿರಿಯೂರು: ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆಗೆ ಗುರುವಾರ ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಚುನಾವಣೆ ನಡೆಯಿತು. ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಶಿಕ್ಷಕರು ಮತ್ತು ಉಪನ್ಯಾಸಕರು ಮತದಾನ ಮಾಡಿದರು. ಸಂಜೆ ಮತಗಳ ಎಣಿಕೆ ನಡೆಸಿ ಫಲಿತಾಂಶವನ್ನು ಪ್ರಕಟಿಸಲಾಯಿತು.
ಪ್ರಾಥಮಿಕ ಶಾಲಾ ವಿಭಾಗದ 4 ಸ್ಥಾನಗಳಿಗೆ 9 ಶಿಕ್ಷಕರು ಕಣದಲ್ಲಿದ್ದರು. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಯಬ್ಬೆ ಪಾಳ್ಯದ ಮಂಜುನಾಥ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಟ್ಟಯ್ಯನಕಟ್ಟೆಯ ಎಚ್. ಕೃಷ್ಣಮೂರ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಹಟ್ಟಿ-ಮ್ಯಾಕ್ಲೂರಹಳ್ಳಿಯ ಆರ್. ಟಿ. ಪರಮೇಶ್ವರಪ್ಪ , ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಬ್ಬೂರು ಫಾರಂನ ಬಿ. ರಮೇಶ್ ಆಯ್ಕೆಯಾದರು
ಪ್ರೌಢಶಾಲಾ ವಿಭಾಗದ ಎರಡು ಸ್ಥಾನಗಳಿಗೆ ಮೂರು ಶಿಕ್ಷಕರು ಸ್ಪರ್ಧಿಸಿದ್ದರು. ಸರ್ಕಾರಿ ಪ್ರೌಢಶಾಲೆ ಪಿಲಾಲಿಯ ಮಂಜುನಾಥ್ ಹಾಗೂ ಸರ್ಕಾರಿ ಪ್ರೌಢಶಾಲೆ ಹರಿಯಬ್ಬೆಯ ಶಿವಕುಮಾರ್ ಗೆಲುವಿನ ನಗು ಬೀರಿದರು. ಪದವಿಪೂರ್ವ ಕಾಲೇಜು ವಿಭಾಗದ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೂವರು ಕಣದಲ್ಲಿದ್ದರು. ದೇವರಕೊಟ್ಟ ಸರ್ಕಾರಿ ಪದವಿಪೂರ್ವ ಕಾಲೇಜಿನ ವೆಂಕಟೇಶ್ ಆಯ್ಕೆಯಾದರು.
ಎಸ್‌ಎಸ್‌ಎ ವಿಭಾಗದ ಒಂದು ಸ್ಥಾನಕ್ಕೆ ಐದು ಜನ ಸ್ಪರ್ಧೆ ಮಾಡಿದ್ದರು. ಹಿರಿಯೂರು ಬಿಆರ್‌ಸಿ ಕೇಂದ್ರದ ಬಿಆರ್‌ಪಿ ಶ್ರೀನಿವಾಸ್ ಆಯ್ಕೆಗೊಂಡರು. ನ್ಯಾಯಾಂಗ ಇಲಾಖೆಯ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದು, ರಮೇಶ್ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯತ್‌ದ ಎರಡು ಸ್ಥಾನಗಳಿಗೆ ಮೂರು ಜನ ಸ್ಪರ್ಧಿಸಿದ್ದರು. ಶಿವಮೂರ್ತಿ ಹಾಗೂ ನಜೀರ್ ಅಹಮದ್ ಆಯ್ಕೆಯಾದರು. ಲೋಕೋಪಯೋಗಿ ಇಲಾಖೆಯ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಆಂಥೋನಿ ಆಯ್ಕೆಯಾದರು. ಆರೋಗ್ಯ ಇಲಾಖೆಯ ಐದು ಸ್ಥಾನಗಳಿಗೆ ಆರು ಜನ ಕಣದಲ್ಲಿದ್ದರು. ಅಂತಿಮವಾಗಿ ತಿಪ್ಪೇಸ್ವಾಮಿ, ನಟರಾಜ್, ರಂಗಸ್ವಾಮಿ, ರಮೇಶ್, ಯಶೋಧರ ಗೆಲುವು ಸಾಧಿಸಿದರು. ಒಟ್ಟು ಎಂಟು ಇಲಾಖೆಗಳಿಂದ ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು. ಕೆಲವರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಯಾಗಿ ಎಲ್. ಜಯಣ್ಣ ಕಾರ್ಯನಿರ್ವಹಿಸಿದರು.