Advertisement

ಇಂದ್ರಿಯ ನಿಗ್ರಹ ಮುಖ್ಯ

01:09 PM Dec 25, 2019 | Naveen |

ಹಿರಿಯೂರು: ಒಳ್ಳೆಯ ಕರ್ಮಗಳನ್ನು ಮಾಡುವವನ ಜೀವನ ಉತ್ತಮವಾಗಿಯೂ, ಕೆಟ್ಟ ಕರ್ಮಗಳನ್ನು ಮಾಡುವವರ ಜೀವನ ಕೆಟ್ಟದಾಗಿಯೂ ಇರುತ್ತದೆ. ಇದು ಮಾನವನ ಕೈಯಲ್ಲಿಯೇ ಇದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಜೈನ ಶ್ವೇತಾಂಬರ ತೇರಾಪಂಥ್‌ ಸಭಾ, ಜೈನ ಯುವ ಮಂಚ್‌ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಆಚಾರ್ಯ ಮಹಾಶ್ರಮಣ್‌ಜೀ ಅವರ ಅಹಿಂಸಾ ಯಾತ್ರೆಯ ವಂದನ-ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶರಣರು ಮಾತನಾಡಿದರು.

ಜೈನ ಧರ್ಮ ವಿಶ್ವದ ಅತ್ಯಂತ ಪ್ರಾಚೀನ ಧರ್ಮ. ಇದರ ಪ್ರವರ್ತಕರು 24 ತೀರ್ಥಂಕರರು. ಅವರಲ್ಲಿ ಅಂತಿಮ ಮತ್ತು ಪ್ರಮುಖವಾಗಿ ಗುರುತಿಸಲ್ಪಟ್ಟವರು ವರ್ಧಮಾನ ಮಹಾವೀರರು. ರಾಗ ದ್ವೇಷಿಗಳಾದ ಶತ್ರುಗಳ ಮೇಲೆ ವಿಜಯ ಪಡೆದ ಕಾರಣ ವರ್ಧಮಾನ ಮಹಾವೀರರನ್ನು ಜಿನ ಎಂದು ಕರೆಯಲಾಗಿತ್ತು. ಹಾಗಾಗಿ ಅವರಿಂದ ಪ್ರಚಾರಗೊಂಡ ಧರ್ಮ ಜೈನ ಧರ್ಮವೆಂದು ಪ್ರಸಿದ್ಧಿ ಪಡೆಯಿತು ಎಂದರು.

ಜೈನ ಧರ್ಮದಲ್ಲಿ ಅಹಿಂಸೆಯೇ ಪರಮ ಧರ್ಮವೆಂದು ತಿಳಿಯಲಾಗುತ್ತದೆ. ಬಸವ ಧರ್ಮದಲ್ಲೂ ಅಹಿಂಸೆಯ ಬಗ್ಗೆ ಹೇಳಲಾಗಿದ್ದು, ಬಸವಣ್ಣ ಮತ್ತು ಅವರೊಂದಿಗಿದ್ದ ಶರಣರು ಬಸವ ಧರ್ಮದ ಮೂಲ ದಯೆ ಎಂದು ಹೇಳಿದ್ದಾರೆ. ಜೈನ ಧರ್ಧದಲ್ಲಿ ಅಹಿಂಸೆಗೆ ಮಹತ್ವಪೂರ್ಣ ಸ್ಥಾನ ನೀಡಿರುವಂತೆ 12ನೇ ಶಮಾತನದಲ್ಲಿದ್ದ ಶರಣರು ಕೂಡ ಅಹಿಂಸೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಸ್ಮರಿಸಿದರು.

ಹಿಂದನ ಕಾಲದಲ್ಲಿ ಅಂಧ ಶ್ರದ್ಧೆಯಿಂದ ಪ್ರಾಣಿಗಳ ವಧೆ ಅಥವಾ ಬಲಿ ನೀಡುವುದರಿಂದ ಒಳಿತಾಗುವುದೆಂಬ ನಂಬಿಕೆಯಿತ್ತು. ಆದರೆ ಬಸವಣ್ಣನವರು ಜನರಲ್ಲಿ ಈ ವಿಚಾರವಾಗಿ ಜಾಗೃತಿ ಮೂಡಿಸಿ ಪ್ರಾಣಿ ವಧೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು. ಕೇವಲ ಪ್ರಾಣ ಹರಣ ಮಾತ್ರವಲ್ಲ, ಬದಲಾಗಿ ಅನ್ಯರಿಗೆ ದುಃಖ ನೀಡುವುದು, ಅಸತ್ಯ ಹೇಳುವುದನ್ನು ಕೂಡ ಜೈನಧರ್ಮದಲ್ಲಿ ಹಿಂಸೆಯ ಒಂದು ಅಂಗವೆಂದೇ ಭಾವಿಸಲಾಗುತ್ತದೆ.

Advertisement

ಪ್ರಯತ್ನವಿಲ್ಲದ ಕಾಮ ಭೋಗಗಳ ಆಸಕ್ತಿಯೇ ಹಿಂಸೆ ಎಂದು ಭಗವಾನ್‌ ಮಹಾವೀರರು ಹೇಳಿದ್ದಾರೆ. ಹಾಗಾಗಿ ಮನೋವಿಕಾರಗಳ ಮೇಲೆ ವಿಜಯ ಸಾಧಿಸುವುದು, ಇಂದ್ರಿಯಗಳ ದಮನ ಮತ್ತು ಸಮಸ್ತ ತ್ತಿಗಳನ್ನು ಸಂಕುಚಿತಗೊಳಿಸುವುದನ್ನೇ ಜೈನಧರ್ಮದಲ್ಲಿ ಅಹಿಂಸೆ ಎಂದು ಹೇಳಲಾಗಿದೆ ಎಂದು ತಿಳಿಸಿದರು. ಶರಣರು ಹೇಳುವಂತೆ ಇಂದ್ರಿಯ ನಿಗ್ರಹ ಮಾಡಿದರೆ ಎಲ್ಲಾ ದುಃಖಗಳು ದೂರಾಗುತ್ತವೆ. ಪ್ರತಿ ಇಂದ್ರಿಯದಲ್ಲಿ ಒಂದೊಂದು ಶಕ್ತಿ ಇದೆ. ಆ ಶಕ್ತಿಯನ್ನು ಸಾಧನೆಗೆ ಯಾರು ಬಳಸುತ್ತಾರೋ ಅವರು ಸಾಧಕ ಸತ್ಪುರುಷರಾಗುತ್ತಾರೆ. ಯಾರು ಜೀವನದಲ್ಲಿ ಸಾಧನೆ ಮಾಡುತ್ತಾರೋ ಅವರು ಒಂದು ದಿನ ದೊಡ್ಡ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು. ವನಶ್ರೀ ಮಠದ ಶ್ರೀ ಬಸವಕುಮಾರ ಸ್ವಾಮೀಜಿ ಹಾಗೂ ಜೈನ ಧರ್ಮದ ಅನುಯಾಯಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next