Advertisement

ಕೋವಿಡ್ ನಿರ್ಮೂಲನೆಗೆ ಸಂಕಲ್ಪಮಾಡಿ: ಪೂರ್ಣಿಮಾ

03:37 PM Jun 29, 2020 | Naveen |

ಹಿರಿಯೂರು: ಆರೋಗ್ಯ ಇಲಾಖೆ ಹಾಗೂ ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಿ ಕೋವಿಡ್ ವೈರಸ್‌ ಹೊಡೆದೋಡಿಸಲು ಸಂಕಲ್ಪ ಮಾಡಬೇಕು ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಕರೆ ನೀಡಿದರು.

Advertisement

ನಗರದ ತಾಲೂಕು ಕ್ರೀಡಾಂಗಣದಲ್ಲಿ ಕೋವಿಡ್ ವಾರಿಯರ್ಸ್‌ಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ಮೂರು ತಿಂಗಳುಗಳಿಂದ ತಾಲೂಕು ಆಡಳಿತದ ಸಿಬ್ಬಂದಿ ವರ್ಗ, ಪೊಲೀಸ್‌ ಮತ್ತು ಆರೋಗ್ಯ ಇಲಾಖೆ, ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರ ಸೇವೆ ಅಭಿನಂದನಾರ್ಹ. ಇವರ ಜೊತೆಗೆ ಶಿಕ್ಷಣ ಇಲಾಖೆ, ವಿವಿಧ ಇಲಾಖೆಗಳ ನೌಕರರು ಕೂಡ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಮಾಜದಲ್ಲಿನ ಪ್ರತಿಯೊಬ್ಬ ಯುವಕರೂ ಕೋವಿಡ್ ವಾರಿಯರ್ ಆಗಬೇಕೆಂದರು.

ಆರೋಗ್ಯ ಇಲಾಖೆಯ ಡಾ| ರಂಗನಾಥ್‌ ಮಾತನಾಡಿ, ಕೋವಿಡ್ ವೈರಸ್‌ ಬಗ್ಗೆ ಸಾರ್ವಜನಿಕರು ಭಯ ಪಡದೆ ಎಚ್ಚರಿಕೆ ವಹಿಸಿ ಮಾರ್ಗಸೂಚಿಗಳನ್ನು ಅನುಸರಿಸುವುದು ಬಹಳ ಮುಖ್ಯ. ಕೋವಿಡ್ ರೋಗಿಗಳೆಲ್ಲರೂ ಸಾಯುವುದಿಲ್ಲ. ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ದೀರ್ಘ‌ ಕಾಲ ಅನಾರೋಗ್ಯಪೀಡಿತರಾಗಿದ್ದು ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಂಥವರು ಮಾತ್ರ ಸಾವನ್ನಪ್ಪುತ್ತಾರೆ. ಯಾವುದೇ ಕಾಯಿಲೆಗೆ ಔಷಧಿ ಕಂಡು ಹಿಡಿದು ಪ್ರಯೋಗ ಮಾಡಿ ಬಿಡುಗಡೆ ಮಾಡಲು ಕನಿಷ್ಠ ಎಂಟು ತಿಂಗಳು ಬೇಕು. ಈ ಕಾಯಿಲೆ ಬಂದು ಕೇವಲ ನಾಲ್ಕು ತಿಂಗಳಾಗಿದೆ. ಕಾಯಿಲೆ ಗುಣಪಡಿಸುವಂತಹ ಲಸಿಕೆಯ ಪ್ರಯೋಗ ನಡೆದಿದೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್‌, ತಾಲೂಕು ಆರೋಗ್ಯ ಅಧಿಕಾರಿ ಡಾ| ವೆಂಕಟೇಶ್‌, ತಾಪಂ ಇಒ ಹನುಮಂತಪ್ಪ, ಡಿವೈಎಸ್‌ಪಿ ರೋಷನ್‌ ಜಮೀರ್‌, ಪೌರಾಯುಕ್ತರಾದ ಲೀಲಾವತಿ, ಬಿಇಒ ಪಿ. ರಾಮಯ್ಯ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ. ಶಿವಾನಂದ, ಕೇಶವಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next