ಹಿರಿಯೂರು: ತಾಲೂಕಿನ ಬೀರೇನಹಳ್ಳಿ ವ್ಯಾಪ್ತಿಯಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಆಪ್ ಇಂಡಿಯಾ ಅಧಿಕಾರಿಗಳು ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ವಶಪಡಿಸಿಕೊಂಡಿರುವ ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಪವರ್ ಗ್ರಿಡ್ ದ್ವಾರವನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ಪವರ್ ಗ್ರಿಡ್ ಅಧಿಕಾರಿಗಳು ಹಾಗೂ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಪವರ್ ಗ್ರಿಡ್ ಅಧಿಕಾರಿಗಳು ಭೂಮಿ ಸ್ವಾಧೀನ ಮಾಡಿಕೊಳ್ಳುವಾಗ, ವಿದ್ಯುತ್ ಕಂಬಗಳನ್ನು ಹಾಕಿ ತಂತಿ ಎಳೆಯುವಾಗ ನಡೆದುಕೊಳ್ಳುವ ರೀತಿಗೂ, ಕಾಮಗಾರಿ ಮುಗಿದು ರೈತರಿಗೆ ಪರಿಹಾರ ನೀಡುವಾಗ ನಡೆದುಕೊಳ್ಳುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಪರಿಹಾರ ನೀಡಲು ಮೂರ್‍ನಾಲ್ಕು ವರ್ಷಗಳಿಂದ ಅಲೆದಾಡಿಸುತ್ತಿದ್ದಾರೆ.
ಭೂಸ್ವಾಧೀನಕ್ಕೂ ಮೊದಲು ರೈತರಿಗೆ ನೋಟಿಸ್ ನೀಡುವುದಿಲ್ಲ. ಕಾಮಗಾರಿಯನ್ನು ಆರಂಭಿಸಿದ ನಂತರ ರೈತರಿಗೆ ಕಿರುಕುಳ ನೀಡುತ್ತಾರೆ. ಓಬೀರಾಯನ ಕಾಲದ ಪರಿಹಾರವನ್ನು ರೈತರಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಹಿರಿಯೂರು-ಪಾವಗಡ ಮಾರ್ಗದ ವಿದ್ಯುತ್ ಲೈನ್ ನಿರ್ಮಾಣದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ವಿದ್ಯುತ್ ಮಾರ್ಗದಿಂದ ರೈತರ ತೋಟದಲ್ಲಿನ ತೆಂಗು, ಮಾವಿನ ಎಷ್ಟು ಮರಗಳು ಹೋಗುತ್ತವೆ, ಎಷ್ಟು ಪರಿಹಾರ ನೀಡಬೇಕು ಎಂದು 2018ರ ಸೆಪ್ಟಂಬರ್‌ನಲ್ಲಿ ವರದಿ ನೀಡಿದ್ದರೂ ಗ್ರಿಡ್ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈಗಾಗಲೇ ಹರಿಯಬ್ಬೆ ಲೈನ್ ಚಾರ್ಜ್ ಮಾಡಿದ್ದು, ಲೈನ್ ಕೆಳಗಿನ ಮರಗಳು ಸುಟ್ಟು ಹೋಗಿವೆ. ನಾವು ಯಾವುದೇ ಗಿಡಗಳನ್ನು ಕತ್ತರಿಸಿಲ್ಲ. ನಮಗೆ ಬರಬೇಕಿರುವ ಪರಿಹಾರದ ಹಣವನ್ನು ಯಾರಲ್ಲಿ ಕೇಳಬೇಕು ಎಂದು ರೈತ ಸತೀಶ್ ಕುಮಾರ್ ಪ್ರಶ್ನಿಸಿದರು.
ತೋಟಗಾರಿಕೆ ಇಲಾಖೆ ನೀಡಿರುವ ವರದಿಯಲ್ಲಿ ಹೆಸರು ಇರುವ ರೈತರಿಗೆ ಪವರ್ ಗ್ರಿಡ್ ಕಂಪನಿಯವರು ಪರಿಹಾರ ನೀಡಿಕೆಯಲ್ಲಿ ತಡ ಮಾಡಬಾರದು. ಕೂಡಲೇ ಹಣ ಕೊಡುವ ವ್ಯವಸ್ಥೆ ಮಾಡಿ. ಉಳಿದ ವಿಚಾರಗಳನ್ನು ಜಿಲ್ಲಾ ಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ತಹಶೀಲ್ದಾರ್ ಸತ್ಯನಾರಾಯಣ ರೈತರಿಗೆ ಭರವಸೆ ನೀಡಿದರು.
ರೈತರಿಗೆ ನೋಟಿಸ್ ನೀಡಿ ಭೂಸ್ವಾಧಿಧೀನಕ್ಕೆ ಮೊದಲು ರೈತರಿಗೆ ನೋಟಿಸ್ ನೀಡಬೇಕು. ಪರಿಹಾರ ವಿತರಿಸದೆ ಕಾಮಗಾರಿ ಆರಂಭಿಸಬಾರದು. ಮೈಸೂರಿನಲ್ಲಿ ನೀಡಿರುವಷ್ಟೇ ಪರಿಹಾರವನ್ನು ಇಲ್ಲಿಯೂ ನೀಡಬೇಕು ಎಂದು ರೈತರು ಆಗ್ರಹಿಸಿದರು. ಜಿಲ್ಲಾಧಿಕಾರಿಯವರ ಆದೇಶದಂತೆ ಪರಿಹಾರ ನೀಡುತ್ತೇವೆ ಎಂದು ಪವರ್ ಗ್ರಿಡ್ ಮುಖ್ಯ ವ್ಯವಸ್ಥಾಪಕ ಸುರೇಶ್ ತಿಳಿಸಿದರು.
ಸಭೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ, ಗ್ರಾಮಾಂತರ ಠಾಣೆ ಪಿಎಸ್‌ಐ ಪರಮೇಶ್, ನಗರಠಾಣೆ ಪಿಎಸ್‌ಐ ನಾಗರಾಜ್, ರೈತ ಸಂಘದ ಗೌರವಾಧ್ಯಕ್ಷ ಹೊರಕೇರಪ್ಪ, ಬಿ.ಒ. ಶಿವಕುಮಾರ್, ಸಿ. ಸಿದ್ದರಾಮಣ್ಣ, ಲಕ್ಷ್ಮೀಪತಿ, ತಿಮ್ಮಾರೆಡ್ಡಿ, ಸಿದ್ದಪ್ಪ, ಪಾಂಡುರಂಗಪ್ಪ, ಬಿ.ಆರ್. ರಂಗಸ್ವಾಮಿ, ಅರಳೀಕೆರೆ ತಿಪ್ಪೇಸ್ವಾಮಿ, ಶಿವಲಿಂಗಪ್ಪ ಮತ್ತಿತರರು ಭಾಗವಹಿಸಿದ್ದರು.