ಹಿರಿಯೂರು: ತಾಲೂಕಿನ ವಾಣಿವಿಲಾಸ ಜಲಾಶಯದಿಂದ ವೇದಾವತಿ ನದಿ ಮೂಲಕ ಚಳ್ಳಕೆರೆ ತಾಲೂಕಿನ ನದಿ ಪಾತ್ರದ ಹಳ್ಳಿಗಳಿಗೆ ನೀರು ಹರಿಸುವ ವಿಚಾರದಲ್ಲಿ ಸವಾಲು, ಪ್ರತಿ ಸವಾಲು ಹಾಕಿ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಬಾರದು. ಬದಲು ಸೂಕ್ತ ಪರಿಹಾರಕ್ಕೆ ಮುಂದಾಗಬೇಕು ಎಂದು ರೈತ ಮುಖಂಡ ಆರನಕಟ್ಟೆ ಶಿವಕುಮಾರ್ ಹೇಳಿದರು.
ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ವೇದಾವತಿ ನದಿಗೆ ನೀರು ಬಿಡುಗಡೆ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ಸತ್ಯನಾರಾಯಣ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಜಲಾಶಯ ನಿರ್ವಹಣೆ ಮತ್ತು ನೀರನ್ನು ಸಂರಕ್ಷಣೆ ಮಾಡುವ ಹೊಣೆಗಾರಿಕೆ ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದೆ. ಚಳ್ಳಕೆರೆ ತಾಲೂಕಿಗೆ ನೀರು ಬಿಡುವ ಬಗ್ಗೆ ಪ್ರಾದೇಶಿಕ ಆಯುಕ್ತರು ಹಾಗೂ ನೀರಾವರಿ ಸಲಹಾ ಸಮಿತಿ ತೀರ್ಮಾನ ಮಾಡಬೇಕು ಎಂದರು.
ಈ ಮೊದಲು ಚಳ್ಳಕೆರೆ ತಾಲೂಕಿನ ವೇದಾವತಿ ನದಿ ಪಾತ್ರದ ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 0.25 ಟಿಎಂಸಿ ನೀರು ಬಿಡುವ ಕುರಿತು ಪ್ರಾದೇಶಿಕ ಆಯುಕ್ತರು ಎರಡು ಬಾರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯ ಶಾಸಕರ ಅಭಿಪ್ರಾಯ ಪಡೆದು ಆದೇಶ ಹೊರಡಿಸಿದ್ದಾರೆ. ಈಗ ಹೆಚ್ಚುವರಿ ನೀರು ಬಿಡಬೇಕಾದರೂ ಇದೇ ನಿಯಮ ಅನುಸರಿಸಬೇಕಿತ್ತು. ನೀರಾವರಿ ಸಲಹಾ ಸಮಿತಿ ಆದೇಶವಿಲ್ಲದೆ ನೀರು ಹರಿಸಲು ಹೋಗಿ ಅಧಿಕಾರಿಗಳು ಗೊಂದಲ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ವಾಣಿವಿಲಾಸ ಜಲಾಶಯದಿಂದ 0.25 ಟಿಎಂಸಿ ನೀರು ವೇದಾವತಿ ನದಿ ಮೂಲಕ ಹರಿದು ಚಳ್ಳಕೆರೆಯನ್ನು ತಲುಪುತ್ತದೆಯೋ ಇಲ್ಲವೋ ಎಂಬ ಅಂದಾಜು ಇರಬೇಕಾಗಿತ್ತು. ಅದನ್ನು ಅಂದಾಜಿಸದೆ ಆದೇಶ ಹೊರಡಿಸಿದ್ದು ಎಷ್ಟು ಸರಿ ಎಂದರು. ಡಿವೈಎಸ್‌ಪಿ ರಮೇಶ್ ಮಾತನಾಡಿ,ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಪ್ರತಿಭಟನೆ ನಡೆಸದೆ ಶಾಂತಿ ಕಾಪಾಡಬೇಕು. ಇದೆಲ್ಲಾ ಮುಗಿದ ನಂತರ ಕ್ಷೇತ್ರದ ಶಾಸಕರು, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ರೈತ ಮುಖಂಡರು ಚರ್ಚೆ ನಡೆಸೋಣ ಎಂದರು. ಕಸವನಹಳ್ಳಿ ರಮೇಶ್, ಎಚ್.ಆರ್. ತಿಮಯ್ಯ, ಆಲೂರು ಸಿದ್ದರಾಮಣ್ಣ, ನಾರಾಯಣಾಚಾರ್, ಪಿ.ಕೆ. ಗೌಡ, ಕೆ.ಟಿ. ತಿಪ್ಪೇಸ್ವಾಮಿ, ಸಿಪಿಐ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.