Advertisement

ಭದ್ರಾ ನೀರು ಹರಿಸದಿದ್ರೆ ಹಿರಿಯೂರು ಬಂದ್‌

02:45 PM Aug 19, 2019 | Naveen |

ಹಿರಿಯೂರು: ವಾಣಿವಿಲಾಸ ಸಾಗರಕ್ಕೆ ಸರ್ಕಾರ ಇದೆ ತಿಂಗಳ 31ರ ಒಳಗೆ ನೀರು ಹರಿಸದಿದ್ದರೆ ಸೆಪ್ಟಂಬರ್‌ 10 ರಂದು ಹಿರಿಯೂರು ಬಂದ್‌ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ವಾಣಿವಿಲಾಸ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್‌ ಎಚ್ಚರಿಸಿದರು.

Advertisement

ನಗರದ ಪ್ರವಾಸಿಮಂದಿರದಲ್ಲಿ ನಡೆದ ವಾಣಿವಿಲಾಸ ಸಾಗರ ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾಣಿವಿಲಾಸ ಸಾಗರಕ್ಕೆ ನೀರು ಹರಿಸುವ ಬಗ್ಗೆ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಇದುವರೆಗೂ ಸುಳ್ಳು ಹೇಳುತ್ತಲೇ ಬಂದಿದ್ದಾರೆ. ರಾಜಕಾರಣಿಗಳು ಕೂಡ ಬದ್ಧತೆ ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಜುಲೈನಲ್ಲಿ ನಡೆದ ರೈತರ ಸಮಾವೇಶದಲ್ಲಿ ಭಾಗವಹಿಸಿ ಹೋರಾಟವನ್ನು ಬೆಂಬಲಿಸಿ ಭಾಷಣ ಮಾಡಿ ಹೋದ ಶಾಸಕರು ಸಹ ಈ ಬಗ್ಗೆ ಯಾವುದೇ ಬದ್ಧತೆ ಪ್ರದರ್ಶಿಸಿಲ್ಲ. ಸಮಾವೇಶ ನಡೆದು ಎರಡು ತಿಂಗಳು ಕಳೆಯುತ್ತಾ ಬಂದಿದ್ದರೂ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹಾಗೂ ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭದ್ರಾ ನೀರನ್ನು ವಿವಿ ಸಾಗರಕ್ಕೆ ಹರಿಸುವ ಬಗ್ಗೆ ಯಾವುದೇ ಪ್ರಯತ್ನ ಮಾಡಿದಂತಿಲ್ಲ ಎಂದು ಆಕ್ಷೇಪಿಸಿದರು.

ವಾಣಿವಿಲಾಸಕ್ಕೆ ನೀರು ಹರಿಸುವ ಬಗ್ಗೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಹಾಗೂ ಸಂಸದ ಎ. ನಾರಾಯಣಸ್ವಾಮಿ ಅವರನ್ನು ಬಿಟ್ಟರೆ ಬೇರೆ ಯಾವ ಶಾಸಕರೂ ಆಸಕ್ತಿ ತೋರಿಸುತ್ತಿಲ್ಲ. ವಾಣಿವಿಲಾಸ ಸಾಗರಕ್ಕೆ ಎರಡು ಟಿಎಂಸಿ ನೀರು ಬಂದರೆ ಮೊದಲ ಫಲಾನುಭವಿಗಳೇ ಚಳ್ಳಕೆರೆ ಹಾಗೂ ಚಿತ್ರದುರ್ಗ ಶಾಸಕರು. ಈ ಎರಡು ತಾಲೂಕುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ನಮ್ಮ ತಾಲೂಕಿನ ರೈತರ ತೋಟಗಳಿಗೆ ಯಾವುದೇ ಅನುಕೂಲವಾಗದು. ಈ ವಿಚಾರದಲ್ಲಿ ಮೊದಲಿನಿಂದಲೂ ನಾವು ಹೋರಾಡುತ್ತಿದ್ದೇವೆ. ಹಾಗಾಗಿ ಹೋರಾಟ ನಮ್ಮದು, ಇದರ ಲಾಭ ಪಕ್ಕದ ತಾಲೂಕುಗಳಿಗೆ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರೈಲ್ವೆ ಹಳಿ ಕೆಳಗೆ ಪೈಪ್‌ಲೈನ್‌ ಅಳವಡಿಸಿದರೆ ಪ್ರತಿ ದಿನ 2750 ಕ್ಯೂಸೆಕ್‌ ನೀರು ಹರಿಸಬಹುದಾಗಿದೆ. ಈಗ ಬೈಪಾಸ್‌ ಚಾನಲ್ ಮೂಲಕ ಅಳವಡಿಸುವ ಪೈಪ್‌ಲೈನ್‌ ನಿಂದ ಪ್ರತಿದಿನ 500 ರಿಂದ 600 ಕ್ಯೂಸೆಕ್‌ ನೀರು ಹರಿಸಲು ಸಾಧ್ಯ. ಜೂನ್‌ನಿಂದ ಅಕ್ಟೋಬರ್‌ವರೆಗೆ ಮಾತ್ರ ನೀರು ಹರಿಸುವ ಆದೇಶವಿದ್ದು, ಅಕ್ಟೋಬರ್‌ ನಂತರ ಕಾಡಾದವರು ಯಾವುದೇ ಕಾರಣಕ್ಕೂ ನೀರು ಹರಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಆದ್ದರಿಂದ ಆದಷ್ಟು ಬೇಗ ಪೈಪ್‌ಲೈನ್‌ ಕಾಮಗಾರಿ ಮುಗಿಸಿ ಮಳೆಗಾಲ ಮುಗಿಯುವುದರ ಒಳಗೆ ವಾಣಿವಿಲಾಸ ಜಲಾಶಯಕ್ಕೆ ನೀರು ಹರಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next