Advertisement

9 ವರ್ಷದ ಬಳಿಕ ವಿವಿ ಸಾಗರಕ್ಕೆ 100 ಅಡಿ ನೀರು

01:39 PM Dec 12, 2019 | Naveen |

ಸಿದ್ಧಗಂಗಾ ಶಿವಶಂಕರ್‌

Advertisement

ಹಿರಿಯೂರು: ಬರೋಬ್ಬರಿ 9 ವರ್ಷಗಳ ಬಳಿಕ ತಾಲೂಕಿನ ವಾಣಿವಿಲಾಸ ಸಾಗರ ಜಲಾಶಯಕ್ಕೆ 100 ಅಡಿ ನೀರು ಹರಿದು ಬಂದಿದೆ. ಜಲಾಶಯದ ಕೋಡಿ ಮಟ್ಟ 130 ಅಡಿ ಇದ್ದರೆ, ತೂಬಿನ ಮಟ್ಟ 60 ಅಡಿ ಇದೆ. ತಾಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು, ವಾಣಿವಿಲಾಸ ಸಾಗರದ ಮೇಲ್ಭಾಗದಲ್ಲಿರುವ ಹೊಸದುರ್ಗ ತಾಲೂಕು, ಚಿಕ್ಕಮಗಳೂರಿನ ಕಡೂರು, ಬೀರೂರು , ಅಜ್ಜಂಪುರ ತಾಲೂಕುಗಳ ಕೆರೆ ಕಟ್ಟೆಗಳು ಕೋಡಿ ಒಡೆದಿದ್ದವು. ಇದರಿಂದಾಗಿ ವಾಣಿ ವಿಲಾಸ ಸಾಗರಕ್ಕೆ ಹೆಚ್ಚಿನ ನೀರು ಬಂದಿದೆ. ಅಲ್ಲದೆ ಕಳೆದ ಮೂರ್‍ನಾಲ್ಕು ವರ್ಷಗಳಿಗಿಂತ ಈ ಬಾರಿ ಜಲಾಶಯದ ಮೇಲ್ಭಾಗದಲ್ಲಿ ಉತ್ತಮ ಮಳೆಯಾದ ಕಾರಣ ವಿವಿ ಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ.

ಮಳೆಗಾಲ ಆರಂಭವಾಗುವುದಕ್ಕಿಂತ ಮುನ್ನ ಜಲಾಶಯದಲ್ಲಿ ಕೇವಲ 61. 4 ಅಡಿ ನೀರಿತ್ತು. ತಾಲೂಕಿನಲ್ಲಿ ನೀರಿನ ಹಾಹಾಕಾರ ಉಂಟಾಗಿ ಜನ-ಜಾನುವಾರಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ನಂತರ ವರುಣ ಕೃಪೆ ತೋರಿದ್ದರಿಂದ ಉತ್ತಮ ಮಳೆಯಾಗಿ ವಿವಿ ಸಾಗರದಲ್ಲಿ 100 ಅಡಿ ನೀರು ಸಂಗ್ರಹಗೊಳ್ಳುವಂತಾಗಿದೆ.

ವಾಣಿವಿಲಾಸ ಸಾಗರ 30 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಅಡಿಕೆ, ತೆಂಗು ಬೆಳೆಗಳಿಗೆ ಆಧಾರವಾಗಿದೆ. ಇಷ್ಟೇ ಅಲ್ಲ, ಹಿರಿಯೂರು ನಗರ, ಚಿತ್ರದುರ್ಗ, ಚಳ್ಳಕೆರೆ ತಾಲೂಕುಗಳಿಗೆ ಇಲ್ಲಿಂದಲೇ ನೀರು ಪೂರೈಕೆಯಾಗುತ್ತಿದೆ.

ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. 2015ರಲ್ಲಿ 81.50 ಅಡಿ ನೀರು ಬಂದಿದ್ದನ್ನು ಬಿಟ್ಟರೆ ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ನೀರು ಸಂಗ್ರಹಗೊಂಡಿದ್ದು ಇದೇ ಮೊದಲು. 2016ರಲ್ಲಿ 71 ಅಡಿ,
2017ರಲ್ಲಿ 66 ಅಡಿ ನೀರಿನ ಸಂಗ್ರಹವಿತ್ತು. 2019ರ ಮೇ ತಿಂಗಳವರೆಗೆ ನೀರು ಖಾಲಿಯಾಗಿ ಕನಿಷ್ಠ ಮಟ್ಟ 61 ಅಡಿಗೆ ಬಂದು ಡೆಡ್‌ ಸ್ಟೋರೇಜ್‌ ಹಂತ ತಲುಪಿತ್ತು.

Advertisement

ಮಳೆಗಾಲ ಆರಂಭವಾದ ನಂತರ ಜಲಾಶಯಕ್ಕೆ ನೀರು ಬರಲು ಪ್ರಾರಂಭವಾಯಿತು. ಜೂನ್‌ನಿಂದ ಇಲ್ಲಿಯವರೆಗೆ 40 ಅಡಿಗಿಂತ ಹೆಚ್ಚು ನೀರು ಬಂದಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಕಳೆದ ಹತ್ತು ದಿನಗಳಿಂದ 2 ಅಡಿ ನೀರು ಹರಿದು ಬಂದಿದೆ. ಮಾರ್ಚ್‌ 30ರ ತನಕ ಪ್ರತಿ ದಿನ ಬೆಟ್ಟದತಾವರೆ ಕೆರೆಯಿಂದ ವಿವಿ ಸಾಗರಕ್ಕೆ 460 ಕ್ಯೂಸೆಕ್‌ ನೀರು ಹರಿದು ಬರಲಿದೆ.

ಸತತ ಬರಗಾಲದಿಂದ 4 ಲಕ್ಷ ತೆಂಗಿನಮರಗಳು ಒಣಗಿ ರೈತರು ಸಂಕಷ್ಟದಲ್ಲಿದ್ದಾರೆ. ಈಗ ನೀರು ಸಂಗ್ರಹಗೊಳ್ಳುತ್ತಿರುವುದರಿಂದ ನೀರಾವರಿ ಇಲಾಖೆ ಅಧಿಕಾರಿಗಳು ವಿವಿ ಸಾಗರದ ಎಡ ಮತ್ತು ಬಲ ನಾಲೆಗಳನ್ನು ಸ್ವತ್ಛಗೊಳಿಸಬೇಕು. ತೂಬುಗಳನ್ನು ರಿಪೇರಿ ಮಾಡಬೇಕು. ನಾಲೆಗಳಿಗೆ ಅಕ್ರಮ ಪಂಪ್‌ಸೆಟ್‌ ಅಳವಡಿಸಿ ನೀರು ಕಳ್ಳತನ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
. ಕೆ.ಸಿ. ಹೊರಕೇರಪ್ಪ,
ತಾಲೂಕು ರೈತ ಸಂಘದ ಗೌರವಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next