Advertisement

ಮಳೆಗೆ ಮೈದುಂಬಿದ ವಿವಿ ಸಾಗರ

02:53 PM Oct 24, 2019 | Naveen |

ಹಿರಿಯೂರು: ಕೇವಲ ಎರಡೇ ದಿನಗಳಲ್ಲಿ ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ವಾಣಿವಿಲಾಸ ಸಾಗರ ಜಲಾಶಯಕ್ಕೆ ಸುಮಾರು 20 ಅಡಿ ನೀರು ಹರಿದು ಬಂದಿದೆ. ಜಲಾಶಯದ ನೀರಿನ ಮಟ್ಟ ಸುಮಾರು 90 ಅಡಿ ತಲುಪಿದ್ದು, ದಶಕಗಳ ನಂತರ ವಾಣಿವಿಲಾಸ ಸಾಗರ ಹಿಂದಿನ ಗತವೈಭವವನ್ನು ಮರಳಿ ಪಡೆಯುವ ಸೂಚನೆ ಕಂಡು ಬಂದಿದೆ.

Advertisement

ವಾಣಿವಿಲಾಸ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಸುರಿದ ಧಾರಾಕಾರ ಮಳೆಯಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಬಂದಿದ್ದು, ಸುಮಾರು ಎರಡು ದಶಕಗಳ ತರುವಾಯ ವಿವಿ ಸಾಗರಕ್ಕೆ ನಿರೀಕ್ಷೆಗೂ ಮೀರಿ ನೀರು ಹರಿದು ಬಂದಿದೆ. ಇದು ತಾಲೂಕಿನ ಕೃಷಿಕರು ಹಾಗೂ ಜನರಲ್ಲಿ ಸಂತಸ ಮೂಡಿಸಿದೆ.

2001-2002ರಲ್ಲಿ ರಾಜ್ಯಾದ್ಯಂತ ಬರಗಾಲ ತಾಂಡವವಾಡುತ್ತಿರುವಾಗ ಅಚ್ಚರಿ ಎಂಬಂತೆ ವಿವಿ ಸಾಗರ ಜಲಾಶಯದ ನೀರಿನ ಮಟ್ಟ 122 ಅಡಿ ತಲುಪಿತ್ತು. ಈಗ ಎರಡು ದಶಕಗಳ ತರುವಾಯ ಮತ್ತೆ ಗತವೈಭವ ಮರುಕಳಿಸುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಈಗಾಗಲೇ ಜಲಾಶಯದಲ್ಲಿ 90 ಅಡಿಯಷ್ಟು ನೀರು ಸಂಗ್ರಹವಾಗಿರುವುದರಿಂದ ತಾಲೂಕಿನ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಮೈದುಂಬಿಕೊಂಡಿರುವ ವಾಣಿವಿಲಾಸ ಸಾಗರ ಜಲಾಶಯ ವೀಕ್ಷಣೆಗೆ ಜನರು ಪ್ರವಾಹೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹೊಸದುರ್ಗ ತಾಲೂಕಿನ ಕೆಲ್ಲೋಡು, ಹೊಳಲ್ಕೆರೆ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ವೇದಾವತಿ ನದಿ ತುಂಬಿ ಹರಿಯುತ್ತಿದೆ. ಅಕ್ಟೋಬರ್‌ ತಿಂಗಳೊಂದರಲ್ಲೇ ವಿವಿ ಸಾಗರಕ್ಕೆ 20 ಅಡಿ ನೀರು ಹರಿದು ಬಂದಿರುವುದು ದಾಖಲೆ ನಿರ್ಮಿಸಿದಂತಾಗಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಇದೇ ರೀತಿ ಒಳಹರಿವು ಮುಂದುವರಿದರೆ ನೀರು ಸಂಗ್ರಹ ಮಟ್ಟ 100 ಅಡಿ ದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next