ಚಂದ್ರಶೇಖರ ಯರದಿಹಾಳ
ಸಿಂಧನೂರು: ಇಲ್ಲಿನ ರಾಯಚೂರು ರಸ್ತೆಯಲ್ಲಿನ ಹಿರೇಹಳ್ಳದ ಮುಖ್ಯ ಸೇತುವೆಯ ಪಾದಚಾರಿ ರಸ್ತೆ ಸಂಪೂರ್ಣ ಕುಸಿಯುವಂತಾಗಿದ್ದು, ಪಾದಚಾರಿಗಳು, ವಾಹನ ಸವಾರರು ಯಾಮಾರಿದ್ರೆ ಜೀವಕ್ಕೆ ಸಂಚಕಾರ ತರುವಂತಿದೆ.
2000-2001ರಲ್ಲಿ ಕೆ.ಎಸ್.ಎಸ್.ಐ.ಪಿ. ಯೋಜನೆ ಅನುದಾನದಲ್ಲಿ ರಾಯಚೂರಿನ ಶಕ್ತಿನಗರದಿಂದ ಸಿಂಧನೂರುವರೆಗೂ ರಾಜ್ಯ ಹೆದ್ದಾರಿ ನಿರ್ಮಿಸಲಾಗಿದೆ. ಸಿಂಧನೂರು ನಗರ ಪ್ರವೇಶಿಸುವ ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಿಸಿ 19 ವರ್ಷವಾದರೂ ನಿರ್ವಹಣೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುಂದಾಗದ್ದರಿಂದ ಸೇತುವೆ ಶಿಥಿಲಗೊಳ್ಳುತ್ತಿದೆ. ಅದರಲ್ಲೂ ಸೇತುವೆಯ ಪಾದಚಾರಿ ರಸ್ತೆ ಹಳ್ಳ ಹಿಡಿದಿದೆ.
ಭಾರೀ ವಾಹನ ಸಂಚಾರ: ರಾಜ್ಯ ಹೆದ್ದಾರಿಯ ಮುಖ್ಯ ಸೇತುವೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸೇತುವೆ ಮೇಲೆ ಸಂಚರಿಸುತ್ತವೆ. ಭಾರೀ ವಾಹನಗಳ ಓಡಾಟದಿಂದ ಸೇತುವೆ ಶಿಥಿಲಗೊಂಡು ಅಲ್ಲಲ್ಲಿ ಕುಸಿಯುವಂತಾಗಿದೆ. ಈ ಸೇತುವೆ ಬೀದರ, ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಸೇರಿದಂತೆ ಹೊರರಾಜ್ಯಗಳಾದ ಹೈದ್ರಾಬಾದ್, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಸೇತುವೆ ಮೇಲೆ ಲೋಡ್ ತುಂಬಿದ ಭಾರೀ ವಾಹನಗಳು ಸಂಚರಿಸುತ್ತಿವೆ. ಆದರೆ ಹಿರೇಹಳ್ಳದ ಸೇತುವೆ ಶಿಥಿಲಗೊಂಡು ತೂಗುಯ್ನಾಲೆಯಂತಾಗಿದ್ದು, ಪಾದಚಾರಿಗಳು, ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಿದೆ. ಇದೇ ಮಾರ್ಗವಾಗಿ ಪಿಡಬ್ಲ್ಯೂಡಿ ಕ್ಯಾಂಪಿನವರೆಗೂ ಅನೇಕ ಶಾಲಾ ಕಾಲೇಜುಗಳಿದ್ದು, ವಿದ್ಯಾರ್ಥಿಗಳು ನಿತ್ಯ ಭಯದಲ್ಲೇ ಸಂಚರಿಸಬೇಕಿದೆ.
ಜಾಲಿಗಿಡಗಳು: ಇನ್ನು ಹಿರೇಹಳ್ಳದ ಸುತ್ತಲು ಇರುವ ಖಾಲಿ ಜಾಗೆಗಳಲ್ಲಿ ಜಾಲಿಗಿಡಗಳು ಬೆಳೆದಿವೆ. ಹಿರೇಹಳ್ಳದ ದಂಡೆ ಮೇಲೆ ಪ್ಲಾಸ್ಟಿಕ ತ್ಯಾಜ್ಯ, ಕೋಳಿ ಮಾಂಸದ ತ್ಯಾಜ್ಯ ಎಸೆಯಲಾಗುತ್ತಿದೆ. ಒಂದು ಕಾಲದಲ್ಲಿ ಸಿಂಧನೂರು ಜನರ ದಾಹ ತಣಿಸುತ್ತಿದ್ದ ಹಿರೇಹಳ್ಳ ಇಂದು ತಿಪ್ಪೆಗುಂಡಿಯಂತಾಗಿದೆ. ಹಳ್ಳದ ಮೇಲೆ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಿದೆ. ಅಕ್ರಮ ಮರಳು ಸಾಗಣೆಯಿಂದಾಗಿ ಹಳ್ಳದ ಒಡಲು ಬರಿದಾಗಿ ಜಾಲಿಗಿಡಗಳು ಬೆಳೆದಿವೆ. ಸೇತುವೆಯ ಕೆಳಭಾಗದಲ್ಲಿ ದೊಡ್ಡ ದೊಡ್ಡ ಕಂದಕಗಳು ಬಿದ್ದಿವೆ. ಆಸುಪಾಸಿನಲ್ಲಿ ಮರಳು ಸಾಗಾಣಿಕೆ ಎಗ್ಗಿಲ್ಲದೆ ಸಾಗುತ್ತಿದೆ. ಮರಳು ಸಾಗಾಣಿಕೆ ತಡೆಗೆ ಅಧಿಕಾರಿಗಳು ಮುಂದಾಗುತ್ತಿಲ್ಲ. ಕೂಡಲೇ ಸಂಬಂಧಿ ಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸೇತುವೆ ದುರಸ್ತಿಗೆ ಮುಂದಾಗಬೇಕು. ಹಳ್ಳದ ದಂಡೆಗೆ ತ್ಯಾಜ್ಯ ಎಸೆಯುವುದನ್ನು ತಡೆಯಬೇಕು. ಹಳ್ಳದಲ್ಲಿನ ಮರಳು ಸಾಗಾಟ ತಡೆಯಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.