ಮೂಡಬಿದಿರೆ: ಹನ್ನೆರಡನೇ ಶತಮಾನದ ಶಿವಶರಣರಲ್ಲಿ ಕಾಯಕ ತತ್ವದ ಬಗ್ಗೆ ವಿಶೇಷ ಗೌರವವಿದ್ದು ಸತ್ಯ ಶುದ್ಧ ಕಾಯಕ ಭಾವದಿಂದ ನಿಯಮ, ಚೌಕಟ್ಟಿನೊಳಗೆ ಮಾಡುವ ದುಡಿಮೆ ಮತ್ತು ಗಳಿಸುವ ದ್ರವ್ಯವೇ “ನೇಮದ ಕೂಲಿ’ ಎಂದೆನಿಸಲ್ಪಡುತ್ತಿತ್ತು. ಆದರೆ ಇಂದು ಇದಕ್ಕೆ ತದ್ವಿರುದ್ಧವಾಗಿ ಯಾವುದೇ ದಾರಿಯಿಂದಲಾದರೂ ಧನ ಸಂಗ್ರಹವೊಂದೇ ಧ್ಯೇಯವಾಗಿ ಪರಿಣಮಿಸಿದೆ ಎಂದು ಸಾಹಿತಿ ಡಾ| ಕುಮಾರ ಚಲ್ಯ ವಿಷಾದಿಸಿದರು.
ಕಾಂತಾವರ ಕನ್ನಡ ಸಂಘದಲ್ಲಿ ರವಿವಾರ ನಡೆದ ಕಾಂತಾವರ ಅಲ್ಲಮಪ್ರಭು ಪೀಠದ “ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಕಾರ್ಯಕ್ರಮದಲ್ಲಿ “ಲಿಂಗೈಕ್ಯ ವನಜಾ ಮತ್ತು ಶಾಂತಪ್ಪ ಅಡಿಕೆ ಮಂಡಿ ಸಾಗರ ದತ್ತಿನಿಧಿ’ ಉಪನ್ಯಾಸದಲ್ಲಿ ಅವರು “ನೇಮದ ಕೂಲಿ’ ಎಂಬ ವಿಷಯದ ಕುರಿತು ಮಾತನಾಡಿದರು.
ಜನರಿಗೆ ಸರಕಾರವು ಸರ್ವ ಭಾಗ್ಯಗಳನ್ನೂ ನೀಡಿ ಅವರನ್ನು ಸೋಮಾರಿಗಳನ್ನಾಗಿಸಿದೆ. ಜನ ದುಡಿಮೆ ಬಿಟ್ಟು ಬಿಟ್ಟಿಗಾಗಿ ಹಾತೊರೆಯು ವಂತಾಗಿದೆ. ಸ್ವಯಂ ಉದ್ಯೋಗದ ನಿರ್ಮಾಣದೊಂದಿಗೆ ದುಡಿದುಣ್ಣುವ ಆಲೋಚನೆಗೆ ಇಂಬು ನೀಡಿದ ಶರಣರ ಕಾಯಕ ತತ್ವವು ಶ್ರಮವಹಿಸಿ ಕೆಲಸ ಮಾಡಿ ಆದಾಯ ಗಳಿಸಿ ಅದನ್ನು ಮಿತವಾಗಿ ಬಳಸುತ್ತ ಮಿಕ್ಕಿದುದನ್ನು ಸಮಾಜಕ್ಕಾಗಿ ವಿನಿಯೋಗಿಸುವ “ನೇಮದ ಕೂಲಿ’ ಸಿದ್ಧಾಂತವನ್ನು ಪ್ರತಿ ಪಾದಿಸಿದೆ ಎಂದರು.
ಇದು ಅಸಮಾನತೆಯ ನಿವಾರಣೆಗೂ ಮಹತ್ವದ ಕೊಡುಗೆಯಾಗಿತ್ತು. ಹನ್ನೆರ ಡನೇ ಶತಮಾನದಲ್ಲಿ ಸಮಾನತೆಯ ತತ್ವವನ್ನಿಟ್ಟುಕೊಂಡು ರೂಪುಗೊಂಡ ಹನ್ನೆರಡನೇ ಶತಮಾನದ ಅನುಭವ ಮಂಟಪವು ಜಾಗತಿಕ ಮಟ್ಟದ ಮೊತ್ತ ಮೊದಲ ಸಮಾವೇಶವಾಗಿದ್ದು ಅಂತಹ ಪ್ರಯತ್ನಗಳು ಇಂದಿನ ಕಾಲಕ್ಕೆ ಕೂಡ ಪ್ರಸ್ತುತವಾಗಿವೆ ಎಂದರು.
ದತ್ತಿನಿಧಿ ಪ್ರಾಯೋಜಕರಾದ ಸಾಗರದ ರೇಖಾ ಮತ್ತು ಶಿವಕುಮಾರ್ ದಂಪತಿ ಮತ್ತು ಅತಿಥಿಗಳನ್ನು ಸಮ್ಮಾನಿಸಲಾಯಿತು. ಡಾ| ನಾ. ಮೊಗಸಾಲೆ ಸ್ವಾಗತಿಸಿ, ಕಲ್ಲೂರು ನಾಗೇಶ್ ನಿರೂಪಿಸಿ, ಸದಾನಂದ ನಾರಾವಿ ವಂದಿಸಿದರು.