ಸಾಗರ: ತಾಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕೆಲವು ಸದಸ್ಯರ ಜೊತೆ ಸೇರಿ ಹಿರೇಬಿಲಗುಂಜಿ ಗ್ರಾಪಂ ಪಿಡಿಓ ಧರ್ಮಪ್ಪ ಅವರ ದಿಢೀರ್ ವರ್ಗಾವಣೆ ಮಾಡಿರುವುದು ಹಾಗೂ ಜನಪ್ರತಿನಿಧಿಗಳು ಮುಕ್ತವಾಗಿ ಆಡಳಿತ ನಡೆಸಲು ತಾಪಂ ಇಓ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಸಾಮಾನ್ಯ ಸಭೆಯನ್ನು ಬಹಿಷ್ಕಾರ ಮಾಡಿದ ಘಟನೆ ಬುಧವಾರ ನಡೆದಿದೆ.
ಹಿರೇಬಿಲಗುಂಜಿ ಗ್ರಾಪಂ ಅಧ್ಯಕ್ಷೆ ಗಾಯಿತ್ರಿ ಯೋಗೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಾಮಾನ್ಯ ಸಭೆ ಕರೆಯಲಾಗಿತ್ತು. ಆದರೆ ಕಳೆದ ಮೂರು ತಿಂಗಳಿನಿಂದ ಇಬ್ಬರು ಪಿಡಿಓ ವರ್ಗಾವಣೆಯಿಂದ ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ವಿಷಯ ತರಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಳ್ಳದೇ ಪಿಡಿಓ ವರ್ಗಾವಣೆ ಮಾಡಲಾಗಿದೆ ಎಂದು ಅಧ್ಯಕ್ಷೆ ಗಾಯಿತ್ರಿ ಯೋಗೇಶ್ ಆಕ್ಷೇಪಿಸಿದರು.
ಗ್ರಾಪಂ ವ್ಯಾಪ್ತಿಯ ಅಡ್ಡೇರಿ ಹಾಗೂ ಚಿಕ್ಕಬಿಲಗುಂಜಿ ಗ್ರಾಮದ ಕುಡಿಯುವ ನೀರಿನ ಪೂರೈಕೆ ಸಂಬಂಧಿಸಿದಂತೆ ವರ್ಷದ ಹಿಂದೆ ಬೋರ್‌ವೆಲ್ ಕೊರೆಸಲಾಗಿತ್ತು. ಇಬ್ಬರು ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದೆ ಅಧ್ಯಕ್ಷರ ಗಮನಕ್ಕೂ ಬಾರದೇ ತಾಪಂ ಇಓ ಸೂಚನೆ ಮೇರೆಗೆ ಹಿಂದಿನ ಪಿಡಿಓ ಚಿಕ್ಕಬಿಲಗುಂಜಿ ಗ್ರಾಮದ ಕುಡಿಯುವ ನೀರಿನ ಪೂರೈಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕ್ರಮ ಕೈಗೊಂಡಿದ್ದಾರೆ. ಈ ಮೂಲಕ ಅಧ್ಯಕ್ಷರನ್ನು ಕಡೆಗಣಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.
ಈಗ ಏಕಾಏಕಿ ಪಿಡಿಓ ಧರ್ಮಪ್ಪ ಅವರನ್ನು ಚನ್ನಗೊಂಡ ಗ್ರಾಪಂಗೆ ನಿಯೋಜಿಸಲಾಗಿದೆ. ಅಲ್ಲಿನ ಪಿಡಿಓ ವಿಮಲಾಕ್ಷಿಯವರನ್ನು ಹಿರೇಬಿಲಗುಂಜಿ ಗ್ರಾ ಪಂಗೆ ನಿಯೋಜಿಸಲಾಗಿದೆ. ಈ ಬಗ್ಗೆ ತಾಪಂ ಇಓ ಅಧ್ಯಕ್ಷರಿಗೆ ಯಾವುದೇ ಮಾಹಿತಿ ನೀಡಿಲ್ಲ. ಪಂಚಾಯ್ತಿ ಅನುದಾನದಲ್ಲಿ ಇನ್ನೊಂದು ಬೋರ್‌ವೆಲ್ ಕೊರೆಸಲು ಸದಸ್ಯರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಇಓ ಅನುಮೋದನೆ ನೀಡುವ ಬದಲು ಅಧ್ಯಕ್ಷರ ಸೂಚನೆ ಮೀರಿ ಒಂದು ಗ್ರಾಮಕ್ಕೆ ತೊಂದರೆ ಮಾಡಿ ಇನ್ನೊಂದು ಊರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈಗ ಅಡ್ಠೇರಿ ಗ್ರಾಮದ ನೀರಿನ ಸಮಸ್ಯೆಯಿಂದಾಗಿ ಸಾರ್ವಜನಿಕರಲ್ಲಿ ಗ್ರಾಪಂ ಆಡಳಿತದ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಲು ಹೊರಟಿದ್ದಾರೆ. ಆದ್ದರಿಂದ ಜನಪ್ರತಿನಿಧಿಗಳು ಮುಕ್ತವಾಗಿ ಆಡಳಿತ ನಡೆಸಲು ತಾಪಂ ಇಓ ಅವಕಾಶ ಕೊಡುತ್ತಿಲ್ಲ. ಅವರು ಬಂದು ಸಮಸ್ಯೆಗಳನ್ನು ಪರಿಹರಿಸದಿದ್ದರೆ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅಧ್ಯಕ್ಷೆ ಗಾಯಿತ್ರಿ ಯೋಗೇಶ್ ಘೋಷಿಸಿ ಸಾಮಾನ್ಯ ಸಭೆ ಬಹಿಷ್ಕರಿಸಿ ಹೊರನಡೆದರು.