ತಿ.ನರಸೀಪುರ: ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಿತದೃಷ್ಟಿಯಿಂದ ಹಿರಿಯ ದಲಿತ ನಾಯಕ ಹಾಗೂ ನಿರ್ಗಮಿತ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮಲ್ಲೇಶ ಚುಂಚನಹಳ್ಳಿ ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭಾ ಚುನಾವಣೆ ಹಿತದೃಷ್ಟಿಯಿಂದ ನೂತನ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಂದ ತೆರವಾಗುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಮತ್ತೋರ್ವ ದಲಿತ ನಾಯಕ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ನಾಮ ನಿರ್ದೇಶನ ಮಾಡಬೇಕು. ಮೈಸೂರು ಜಿಲ್ಲೆಗೆ ಪ್ರಾಮುಖ್ಯತೆ ನೀಡಲು ಮಹದೇವಪ್ಪಗೆ ಮತ್ತೂಮ್ಮೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಇದೀಗ ರಾಜ್ಯ ರಾಜಕಾರಣ ಅನೇಕ ತಿರುವುಗಳನ್ನು ಪಡೆದುಕೊಂಡಿದ್ದು, ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ದಲಿತ ನಾಯಕರಾದ ಡಾ.ಎಚ್.ಸಿ.ಮಹದೇವಪ್ಪ ಸೋಲು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಬಡವರು ಮತ್ತು ರೈತಪರ ಆಡಳಿತ ನೀಡಿದ್ದರೂ ಜನಮನ್ನಣೆ ನೀಡದಿರುವುದು ವಿಷಾದಕರ ಸಂಗತಿಯಾಗಿದೆ. ಮಹದೇವಪ್ಪ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವಂತೆ ವರಿಷ್ಠರು ಹಾಗೂ ನಾಯಕರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.
ತಾಲೂಕು ಸಂಚಾಲಕ ಯರಗನಹಳ್ಳಿ ಸುರೇಶ ಮಾತನಾಡಿ, ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಸಾಮಾನ್ಯ ಜನರಿಗೆ ಸಿಗಲ್ಲವೆಂಬ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಜನರನ್ನು ದಿಕ್ಕು ತಪ್ಪಿಸಿ ಸೋಲಿಸಲಾಗಿದೆ. ತಡವಾಗಿಯಾದರೂ ನಿರ್ಗಮಿತ ಸಚಿವರ ದೂರದೃಷ್ಟಿ ಕಾಳಜಿ ಹಾಗೂ ಅಭಿವೃದ್ಧಿ ಚಿಂತನೆಗಳು ಜನರಿಗೆ ಅರಿವಾಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಂಘಟನಾ ಸಂಚಾಲಕ ವಾಟಾಳ್ ನಾಗರಾಜು, ನಂಜನಗೂಡು ಸಂಚಾಲಕ ದೇವರಸನಹಳ್ಳಿ ಪುಟ್ಟಸ್ವಾಮಿ, ತೊಟ್ಟವಾಡಿ ರಾಚಪ್ಪ, ರವಿ, ಮಲ್ಲಯ್ಯ, ಮಾದೇಶ, ಚಿನ್ನಸ್ವಾಮಿ, ಮಾದಿಗಹಳ್ಳಿ ರಾಮು, ಮಹದೇವಸ್ವಾಮಿ, ಗಂಗಾಧರ, ಮಹದೇವಸ್ವಾಮಿ ಇನ್ನಿತರರಿದ್ದರು.