Advertisement

ಸರ್ಕಾರಿ ಆಸ್ಪತ್ರೆಗೆ ಕಾಯಂ ವೈದ್ಯರನ್ನು ನೇಮಿಸಿ

10:07 PM Jul 19, 2019 | Team Udayavani |

ಅರಸೀಕೆರೆ: ತಾಲೂಕಿನ ಬಾಣಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಕಾಯಂ ವೈದ್ಯರನ್ನು ಸರ್ಕಾರ ನೇಮಕ ಮಾಡಬೇಕೆಂದು ಒತ್ತಾಯಿಸಿ ನಡೆಸಿದ ರೈತ ಸಂಘದ ಹೋರಾಟಕ್ಕೆ ಗ್ರಾಪಂ ಅಧ್ಯಕ್ಷರು, ಸದಸ್ಯರು ಬೆಂಬಲ ನೀಡಿದರು.

Advertisement

ತಾಲೂಕಿನ ಬಾಣಾವರ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಮುಂಭಾಗದಲ್ಲಿ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನ ಕುಮಾರ್‌ ನೇತೃತ್ವದಲ್ಲಿ ಗುಂಪು ಸೇರಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕೂಡಲೇ ವೈದ್ಯರನ್ನು ನೇಮಿಸಬೇಕೆಂದು ಆಗ್ರಹಿಸಿದರು.

ಮಲತಾಯಿ ಧೋರಣೆ: ಒಂದು ಕಾಲದಲ್ಲಿ ಬಾಣಾವರ ತಾಲೂಕು ಕೇಂದ್ರವಾಗಿತ್ತು. ಕಾರಣಾಂತರಗಳಿಂದ ಇಂದು ಗ್ರಾಪಂ ಮಟ್ಟಕ್ಕೆ ಬಂದು ನಿಂತಿರುವುದು ಅತ್ಯಂತ ವಿಷಾದದ ಸಂಗತಿ. ಈ ಗ್ರಾಮದ ಮಧ್ಯೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುತ್ತಿದ್ದು, ಉತ್ತಮ ವ್ಯಾಪಾರ ವ್ಯವಹಾರ ಕೇಂದ್ರವಾಗಿದೆ.

ಆದರೂ ಇಲ್ಲಿನ ಜನತೆಗೆ ಮೂಲಭೂತ ಸೌಲಭ್ಯ ನೀಡುವಲ್ಲಿ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವೈದ್ಯರನ್ನು ಕಾಯಂ ನೇಮಕ ಮಾಡಲು ಚುನಾಯಿತ ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗ್ರಾಪಂ ಉಪಾಧ್ಯಕ್ಷ ಬಿ.ಡಿ.ಮಲ್ಲಿಕ್‌ ಮಾತನಾಡಿ, ಸರ್ಕಾರ ಆಸ್ಪತ್ರೆಗೆ ಅವಶ್ಯಕ ವೈದ್ಯರನ್ನು ನೇಮಕ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.

Advertisement

ನಂತರ ಪ್ರತಿಭಟನಾಕಾರರು ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಕರಾದ ಜಬೀರ್‌ ಪಾಷಾರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಬಾಣಾವರ ಗ್ರಾಪಂ ಅಧ್ಯಕ್ಷೆ ನಸೀಮಾಬಾನು, ಮಾಜಿ ಅಧ್ಯಕ್ಷೆ ಲೀಲಾವತಿ, ಸದಸ್ಯರಾದ ರಾಜಣ್ಣ, ಜಬೀವುಲ್ಲಾ, ರಹೀಂ, ಲಲಿತಮ್ಮ, ಸಜ್ಜನ್‌ ಬಾಯಿ, ಹೇಮಾವತಿ, ಆಶಾ, ಶಾರದಮ್ಮ, ನಾಗಮಣಿ, ಮೀನಾಕ್ಷಮ್ಮ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಕಾಲದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ: ಬಾಣಾವರ ಗ್ರಾಮದ ಸುತ್ತಮುತ್ತಲಿನ 50 ಹಳ್ಳಿಗಳ ಸುಮಾರು 40 ಸಾವಿರ ಜನ ಸಣ್ಣಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಇಲ್ಲಿನ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ, ಈ ಆಸ್ಪತ್ರೆಯಲ್ಲಿ ಅವಶ್ಯಕವಾದ ಕಾಯಂ ವೈದ್ಯರನ್ನೇ ಸರ್ಕಾರ ನೇಮಕ ಮಾಡಿಲ್ಲ. ಬದಲಿಗೆ ಕೊಳಗುಂದ ಗ್ರಾಮದ ವೈದ್ಯರನ್ನು ತಾತ್ಕಾಲಿಕವಾಗಿ ಕಳುಹಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತಿವೆ. ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕಾರಣ ಆಕಸ್ಮಿಕ ರಸ್ತೆ ಅಪಘಾತಗಳು ನಡೆಯುತ್ತಿದ್ದು, ಅಪಘಾತದಲ್ಲಿ ಗಾಯಗೊಂಡವರಿಗೆ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಅವರು ತಾಲೂಕು ಅಥವಾ ಜಿಲ್ಲಾ ಆಸ್ಪತ್ರೆಗಳಿಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾ ರೈತಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನ ಕುಮಾರ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next