Advertisement
ಪ್ರಾರಂಭದ ದೇವೇಂದ್ರನ ಒಡ್ಡೋಲಗ ಶಿಸ್ತುಬದ್ಧವಾಗಿ ಚುರುಕಾಗಿ ನಡೆಯಿತು ಮಾತ್ರವಲ್ಲ, ದೇವೇಂದ್ರನಾಗಿ ಹರಿರಾಜ್ ಶೆಟ್ಟಿಗಾರರವರ ಪರಂಪರೆಯ ಕಟ್ಟು ಮೀಸೆಯ ವೇಷ, ಶಿಸ್ತುಬದ್ಧ ನಾಟ್ಯ, ಸ್ಪುಟವಾದ ಹಿತಮಿತವಾದ ಮಾತು, ಅಚ್ಚುಕಟ್ಟಾದ ನಿರ್ವಹಣೆ ಮುನ್ನೆಲೆಯಲ್ಲಿ ನಿಲ್ಲುತ್ತದೆ. ತಾರಾಕ್ಷನೊಂದಿಗೆ ಯುದ್ಧದಲ್ಲಿ ಸೋತು ಶಚಿಯಲ್ಲಿಗೆ ಬಂದು ಉಳಿದೆಲ್ಲಾ ಪ್ರಸಂಗಗಳಲ್ಲಿ ಖಳರೊಡನೆ ಯುದ್ಧದಲ್ಲಿ ಸೋತು ಓಡುವುದು ಮಾತ್ರವೇ ಆಗುತಿತ್ತು, ಆದರೆ ಇವತ್ತಿನ ದಿವಸ ಸೋತರೂ ಕೂಡ ಪಲಾಯನ ಮಾಡಲಾಗದೆಯೇ ಇಲ್ಲಿಯೇ ಉಳಿದಿದ್ದೇನೆ, ಮುಂದಿನ ದಿನಗಳಲ್ಲಿ ಜಯವಾಗುತ್ತದೆ ಎಂಬ ಆಶಾ ಭಾವನೆಯಿಂದಲಾಗಿ ಎಂದ ಮಾತು ಕಥೆಯ ಆವರಣದಲ್ಲಿಯೇ ಸಂದೇಶ ವಾಹಕವಾಗಿದ್ದದ್ದು ವಿಶೇಷವಾಗಿತ್ತು.
Related Articles
Advertisement
ಪರಂಪರೆಯ ಬಣ್ಣಗಾರಿಕೆಯಲ್ಲಿ ಬಣ್ಣದ ವೇಷಧಾರಿ ಶ್ವೇತವರಾಹನಾಗಿ ರಾಮಕೃಷ್ಣ ನಂದಿಕೂರು ಅವರು ಅಬ್ಬರದ ಪ್ರವೇಶದಿಂದ ಗಮನಸೆಳೆದು ರಂಗದ ಮುಂಭಾಗದಲ್ಲಿ ಹಿರಣ್ಯಾಕ್ಷನೊಂದಿಗೆ ಮಲ್ಲಯುದ್ಧದ ಪಟ್ಟುಗಳನ್ನು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಅದರೊಂದಿಗೆ ದೊಂದಿ ರಾಳ ಚಿಮ್ಮುವಿಕೆಯಲ್ಲಿ ಅನಗತ್ಯ ಕಾಲಯಾಪನೆ ಮಾಡದೆ ಚುರುಕಾಗಿ ರೈಸುವಿಕೆಯ ಅಬ್ಬರವನ್ನು ಮುಗಿಸಿ ವಿಶಿಷ್ಟವಾದ ರಂಗನಡೆಯನ್ನು ಪ್ರದರ್ಶಿಸಿದ್ದು ಪ್ರಶಂಸನೀಯವಾಗಿತ್ತು.
ಒಂದನೇ ತಾರಾಕ್ಷನಾಗಿ ಕಿರೀಟವೇಷದಲ್ಲಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿಯವರ ನಿರ್ವಹಣೆ ಬಯಲಾಟಕ್ಕೆ ಪೂರಕವಾಗಿತ್ತು. ಗತ್ತಿನ ಪ್ರವೇಶ, ಲೆಕ್ಕಾಚಾರದ ಸುತ್ತು ಮತ್ತು ದಸ್ತು, ಶೃಂಗಾರದ ಪದ್ಯಕ್ಕೆ ಕಿರೀಟ ವೇಷದ ಶಿಸ್ತು ಮೀರದಂತೆ ಹದವಾದ ನಾಟ್ಯ, ಶೃತಿಬದ್ಧವಾದ ಆಯಾಯ ಭಾವಕ್ಕನುಗುಣವಾದ ಮಾತುಗಾರಿಕೆ ತಾರಾಕ್ಷನ ಪ್ರಸ್ತುತಿಯನ್ನು ಎದ್ದು ಕಾಣುವಂತೆ ಮಾಡಿತು. ಸ್ವರ್ಗವನ್ನು ಗೆದ್ದು ದೇವೇಂದ್ರನಲ್ಲಿ ಶಚಿಯನ್ನು ಬಿಟ್ಟುಕೊಡುವಂತೆ ಆಜ್ಞಾಪಿಸಿದಾಗ ಅನುನಯಿಸುವುದಕ್ಕಾಗಿ ಪ್ರಕಟಳಾದ ಶಚಿಯಲ್ಲಿ ನಾನು ಇಷ್ಟು ಉಲ್ಲಾಸವನ್ನು ಅನುಭವಿಸಿ ಕುಣಿಯುವಂತೆ ಮನವಾಗದೇ ಬಹಳ ಕಾಲವೇ ಆಯಿತು ಎಂದ ಮಾತು ಮಾರ್ಮಿಕವಾಗಿತ್ತು.
ಹರಿಯುತ್ತಿರುವ ಸರಸ್ವತಿ ನದಿಯು ಬಂದ ಲಹರಿಗೆ ಒದಗಿ ಹೆಣ್ಣಾಗಿ ಪ್ರಕಟವಾಗುವ ಭಾವವನ್ನು ತಮ್ಮ ಪ್ರವೇಶದಲ್ಲಿ ಅತ್ಯಂತ ಸುಂದರವಾಗಿ ಮೂಡಿಸಿದ ಸಂತೋಷ ಹಿಲಿಯಾಣರವರು ತಮಗಿರುವ ಸೀಮಿತವಾದ ಅವಕಾಶದಲ್ಲಿ ಲಾಲಿತ್ಯಪೂರ್ಣ ನಾಟ್ಯ, ಪಾತ್ರಕ್ಕೆ ತಕ್ಕ ಮಾತುಗಳಿಂದ ತೂಗಿಸಿದ ಭಾವಾಭಿನಯ, ಚಾಲೂ ಕುಣಿತವನ್ನು ಜಾಣ್ಮೆಯಿಂದ ನಿಭಾಯಿಸಿ ನಂತರದ ಅರ್ಥಗಾರಿಕೆಯಲ್ಲಿ ಅದರ ಛಾಯೆ ಕಾಣದಂತೆ ತೋರಿದ ರಂಗನಡೆ ಸ್ತುತ್ಯಾರ್ಹವಾಗಿತ್ತು. ತಾಮ್ರಾಕ್ಷನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿ ತಾನು ಹರಿಯುವ ನದಿಯೇ ಹೊರತು ಹೆಣ್ಣಲ್ಲವೆಂಬುದಕ್ಕೆ ಸ್ಪಷ್ಟೀಕರಣ ನೀಡುವಾಗ ಆಡಿದ ನಮ್ಮ ಕಣ್ಣಿಗೆ ಕಾಣುವುದೆಲ್ಲವೂ ನಿಜವೇ ಆಗಿರುವುದಿಲ್ಲ, ಕೆಲವೊಮ್ಮೆ ನಮ್ಮ ನಿಲುಕಿಗೆ ಸಿಗದ ಕೆಲವು ವಿಚಾರಗಳೂ ಇರುತ್ತವೆ. ಕಂಡುಕೊಳ್ಳುವುದಕ್ಕೆ ನಮ್ಮ ಅಂತಃಸತ್ವ ದೃಢವಾಗಿರಬೇಕು. ಎಂಬ ಮಾತು ಮಾರ್ಮಿಕವಾಗಿ ಕಂಡಿತು.
ಶಚಿಯಾಗಿ ಇರುವ ಸೀಮಿತವಾದ ಅವಕಾಶದಲ್ಲಿ ಎಲ್ಲಿಯೂ ಗರತಿ ಪಾತ್ರದ ಚೌಕಟ್ಟು ಮೀರದ ಚೆಂದನೆಯ ನಿರ್ವಹಣೆ ತೋರಿದ ಅರುಣ್ ಕೋಟ್ಯಾನ್‌ರ ಪ್ರಸ್ತುತಿ ಭಾವಪೂರ್ಣವಾಗಿತ್ತು.
ಪತಿಧರ್ಮವನ್ನು ಪಾಲಿಸುತ್ತಾ, ಪತಿವಾಕ್ಯಕ್ಕೆ ಅಪದ್ಧವಾಡದೆಯೇ ನಯವಾಗಿಯೇ ಪತಿ ಪರಸ್ತ್ರೀಯರತ್ತ ಮನ ಮಾಡದಂತೆ ತಡೆಯುವ ಆದರ್ಶ ಸ್ತ್ರೀತ್ವದ ಮೌಲ್ಯಗಳನ್ನು ತನ್ನ ಪತಿಯೊಂದಿಗಿನ ಸಂವಾದದಿಂದ ಕಂಡುಕೊಡುವ ತಾರಾಮಣಿಯಾಗಿ ಅಂಬಾಪ್ರಸಾದ್ ಪಾತಾಳರು ಪಾರಂಪರಿಕ ಸ್ತ್ರೀ ವೇಷದ ಗರತಿಯನ್ನು ರಂಗದಲ್ಲಿ ಅನಾವರಣಗೊಳಿಸಿದರು. ಇಲ್ಲಿ ಅವರ ಪ್ರಸ್ತುತಿ ಸ್ತ್ರೀ ಪಾತ್ರವು ತನ್ನ ಸಂವಾದಿ ಪಾತ್ರ ಪತಿಯಾದಾಗ ಸ್ತ್ರೀ ವೇಷದ ಕಲಾವಿದರ ನಡೆ ಹೇಗಿರಬೇಕು ಎಂಬುದಕ್ಕೆ ಒಂದು ನಿದರ್ಶನವಾಗಿ ಪ್ರಕಟವಾಗುತ್ತದೆ.
ಬಣ್ಣದ ವೇಷದಲ್ಲಿ ಎರಡನೇ ತಾರಾಕ್ಷ, ಎರಡನೇ ತಾಮ್ರಾಕ್ಷ, ವಿದ್ಯುನ್ಮಾಲಿಯ ಪ್ರವೇಶ ಮತ್ತು ಅಬ್ಬರದ ಪಾತ್ರಾಭಿನಯ ಬಣ್ಣದ ವೇಷದ ನಡೆಯನ್ನು ಪರಿಣಾಮಕಾರಿಯಾಗಿ ಕಂಡುಕೊಡುವಲ್ಲಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ, ಸಂಜೀವ ಶಿರಂಕಲ್ಲು, ಮನೀಷ್ ಪಾಟಾಳಿ ಎಡನೀರು ಅವರ ಪ್ರಸ್ತುತಿ ಯಶಸ್ವಿಯಾಯಿತು.
ಹಿಮ್ಮೇಳದಲ್ಲಿ ಹವ್ಯಾಸಿ ಭಾಗವತರಾದ ಕುಮಾರಿ ಅಮೃತ ಅಡಿಗರವರ ಗಂಡುಗೊರಳಿನ ಹಾಡುಗಾರಿಕೆ ಕರ್ಣಾನಂದಕರವಾಗಿತ್ತು. ಇಡೀ ಪ್ರದರ್ಶನಕ್ಕೆ ಪೂರಕವಾಗಿ ಸರ್ವಸನ್ನದ್ಧ ಹಿಮ್ಮೇಳವೃಂದದ ಪ್ರಸ್ತುತಿ ಪ್ರಶಂಸನೀಯವಾಗಿತ್ತು.
ಗೌತಮ್ ತಗ್ಗರ್ಸೆ