ಭಾರತ ಹಲವು ಧರ್ಮಗಳ, ಕಲೆಗಳ ವೈವಿಧ್ಯತೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ಪ್ರಪಂಚದ ಏಕಮಾತ್ರ ರಾಷ್ಟ್ರ. ಇಲ್ಲಿಯ ಸಂಗೀತ ವೈವಿಧ್ಯಕ್ಕೆ ಸಾಟಿಯಾಗುವ ಬೇರೊಂದು ರಾಷ್ಟ್ರ ಇಲ್ಲ ಎಂದರೆ ಅತಿಶಯೋಕ್ತಿ ಅಲ್ಲ. ಪ್ರಮುಖವಾಗಿ ನೂರಾರು ಗಾಯಕರು ಧರ್ಮಾತೀತವಾಗಿ, ಜಾತ್ಯಾತೀತವಾಗಿ ಖ್ಯಾತನಾಮರಾಗಿ ಸಂಗೀತ ಲೋಕವನ್ನು ಆಳಿದ್ದಾರೆ. ಅದರಲ್ಲಿಯೂ ಹಿಂದುಸ್ಥಾನಿ ಸಂಗೀತ ಅಗ್ರಗಣ್ಯ ಹಿಂದೂಸ್ಥಾನಿ ಗಾಯಕರಲ್ಲಿ ಒಬ್ಬರಾದ ಪರ್ವೀನ್ ಸುಲ್ತಾನಾ ಅವರ ಧ್ವನಿ ಸಂಗೀತ ಪ್ರೇಮಿಗಳನ್ನು ಧ್ಯಾನಸ್ಥದಿಂದ ಶಕ್ತಿಯುತವಾಗಿ ಪ್ರಚೋದಿಸುವ ಧ್ವನಿಗೆ ರೂಪಾಂತರಗೊಳ್ಳುತ್ತದೆ. ಪಟಿಯಾಲ ಘರಾನಾದ ಹಿರಿಮೆಯನ್ನು ಅವರ ಹಾಡುಗಾರಿಕೆಯಲ್ಲಿ ಪರಿಪೂರ್ಣವಾಗಿ ವ್ಯಕ್ತಪಡಿಸುವ ಗಾಯಕರಲ್ಲಿ ಒಬ್ಬರು.
ಮೇ 1950 ರಲ್ಲಿ ಇಕ್ರಾಮುಲ್ ಮಜೀದ್ ಮತ್ತು ಮಾರುಫಾ ಮಜೀದ್ ದಂಪತಿಯ ಪುತ್ರಿಯಾಗಿ ಜನಿಸಿದ ಬೇಗಂ ಪರ್ವೀನ್ ಸುಲ್ತಾನಾ ಭಾರತೀಯ ಪಟಿಯಾಲ ಘರಾನಾ ಶೈಲಿಯ ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕಿಯರಲ್ಲಿ ಅಗ್ರ ಪಂಕ್ತಿಯ ಹೆಸರು.
ಪರ್ವೀನ್ ಸುಲ್ತಾನಾ ಅವರು ಆಚಾರ್ಯ ಚಿನ್ಮೊಯ್ ಲಾಹಿರಿಯವರಿಂದ ಪ್ರಾಥಮಿಕ ಸಂಗೀತ ತರಬೇತಿ ಪಡೆದರು. ವೃತ್ತಿಜೀವನವನ್ನು ಅಬ್ದುಲ್ ಮಜೀದ್ ಅವರ ಅಸ್ಸಾಮಿ ಚಲನಚಿತ್ರ ಮೊರೊಮ್ ತೃಷ್ನಾದಿಂದ ಪ್ರಾರಂಭಿಸಿದರು. ಅವರು ಬಾಲಿವುಡ್ ಚಲನಚಿತ್ರಗಳಾದ ಗದರ್, ಕುದ್ರತ್, ದೋ ಬೂಂದ್ ಪಾನಿ ಮತ್ತು ಪಕೀಜಾ ಸೇರಿ ನೂರಾರು ಅಸ್ಸಾಮಿ ಚಲನಚಿತ್ರಗಳಿಗೆ ಹಾಡಿದ್ದಾರೆ. ಇತ್ತೀಚೆಗೆ, ಅವರು ವಿಕ್ರಮ್ ಭಟ್ ಅವರ 1920 ರ ಥೀಮ್ ಹಾಡನ್ನು ಹಾಡಿ ಗಮನ ಸೆಳೆದರು.ಸಂಗೀತದ ಪಾಠಗಳನ್ನು ಪಡೆದ ಉಸ್ತಾದ್ ದಿಲ್ಶಾದ್ ಖಾನ್ ಅವರನ್ನು ವಿವಾಹವಾದರು. ಶಾದಾಬ್ ಖಾನ್ ಎಂಬ ಒಬ್ಬ ಮಗಳಿದ್ದಾಳೆ.
ಅಂದುಕೊಂಡಿದ್ದನ್ನು ಸಾಧಿಸುವ ಶಿಸ್ತು ಮತ್ತು ಸಮರ್ಪಣೆಯನ್ನು ನಾನು ನನ್ನ ತಂದೆ ಇಕ್ರಾಮುಲ್ ಮಜೀದ್ ಅವರಿಂದ ಕಲಿತಿದ್ದೇನೆ. ಅವರು ನನ್ನ ಮೊದಲ ಗುರು ಮತ್ತು ಇಂದು ನಾನು ಈ ಸ್ಥಿತಿಗೆ ಬರಲು ಕಾರಣ. ‘ಕ್ಷಣವನ್ನು ವಶಪಡಿಸಿಕೊಳ್ಳಿ’ ಎಂದು ಅವರು ಯಾವಾಗಲೂ ನನಗೆ ಹೇಳುತ್ತಿದ್ದರು ಎನ್ನುತ್ತಾರೆ ಹಿರಿಯ ಗಾಯಕಿ.
ಅಸ್ಸಾಂನ ನಾಗಾನ್ ಜಿಲ್ಲೆಯ ಪುರಾಣಿಗುಡಮ್‌ನಲ್ಲಿ ಬಾಲ್ಯ ಕಳೆದು ಹೆಚ್ಚಿನ ಅಭ್ಯಾಸಕ್ಕಾಗಿ ಕಲಿಯಲು ಕಲ್ಕತ್ತಾಗೆ ತೆರಳಿದರು. ಚಿನ್ಮೊಯ್ ಲಾಹಿರಿ ಮತ್ತು ಪತಿ ಉಸ್ತಾದ್ ದಿಲ್ಶಾದ್ ಖಾನ್ ಜೊತೆಗೆ ಮುಂಬೈಗೆ ಆಗಮಿಸಿ ಖ್ಯಾತಿಯ ಉತ್ತುಂಗಕ್ಕೆ ಏರಿದರು.
”ಸಂಗೀತ ಲೋಕದ ಪಯಣದುದ್ದಕ್ಕೂ ನನ್ನ ಪ್ರತಿಯೊಂದು ನಡೆಯ ಹಿಂದೆ ಸಂಗೀತವೇ ಉದ್ದೇಶವಾಗಿತ್ತು. ನನ್ನ ಧರ್ಮವೂ ಸಂಗೀತವಾಗಿದೆ” ಎಂದು ಪರ್ವೀನ್ ಹೇಳಿಕೊಳ್ಳುತ್ತಾರೆ.
ಇವರ ಸಂಗೀತ ಲೋಕದ ಸಾಧನೆಗೆ ಭಾರತ ಸರಕಾರ 1998 ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನುಯನ್ನು ನೀಡಿ ಗೌರವ ನೀಡಿದೆ.
ಗಂಧರ್ವ ಕಲಾನಿಧಿ(1980) ಮಿಯಾನ್ ತಾನ್ಸೆನ್ ಪ್ರಶಸ್ತಿ(1986) ಸಂಗೀತ ಸಮ್ರಗ್ಗಿ ಅಸ್ಸಾಂ ಸರ್ಕಾರದಿಂದ ಪ್ರದಾನ(1994) ಫಿಲ್ಮ್‌ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿ-ಕುದ್ರತ್ (1981) “ಹಮೇ ತುಮ್ಸೆ ಪ್ಯಾರ್ ಕಿತ್ನಾ” ಹಾಡಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, (1999) ಅಸ್ಸಾಂ ಸರ್ಕಾರದಿಂದ ಶ್ರೀಮಂತ್ ಶಂಕರದೇವ್ ಪ್ರಶಸ್ತಿ ಇವರ ಸಾಧನೆಯ ಕಿರೀಟವನ್ನು ಅಲಂಕರಿಸಿವೆ.
ಪರ್ವೀನ್ ಅವರ ರಾಗ ಮಧುವಂತಿ,ಗೋರಖ್ ಕಲ್ಯಾಣ್,ಮಿಶ್ರ ಭೈರವಿ, ಕಲಾವತಿ, ರಾಗಶ್ರೀ,ಶ್ಯಾಮ್ ಕೌನ್ಸ್,ಶುದ್ಧ ಸಾರಂಗ್, ಮಿಶ್ರ ಕಾಪಿ, ಹಂಸಧ್ವನಿ ಗಳನ್ನು ಕೇಳುವುದೇ ಕರ್ಣಾನಂದಕರ.