ಇಂದೋರ್ : ”ಹಿಂದುಸ್ಥಾನವು ಹಿಂದುಗಳ ದೇಶ; ಹಾಗೆಂದ ಮಾತ್ರಕ್ಕೆ ಅದು ಬೇರೆಯವರಿಗೆ ಸೇರಿದ್ದಲ್ಲ ಎಂದು ಅರ್ಥವಲ್ಲ” ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
“ಜರ್ಮನಿ ಯಾರ ದೇಶ ? ಜರ್ಮನರ ದೇಶ. ಬ್ರಿಟನ್ ಬ್ರಿಟಿಷರ ದೇಶ; ಅಮೆರಿಕ ಅಮೆರಿಕನ್ನರ ದೇಶ. ಇದೇ ರೀತಿ ಹಿಂದುಸ್ಥಾನ ಹಿಂದುಗಳ ದೇಶ; ಹಾಗೆಂದ ಮಾತ್ರಕ್ಕೆ ಹಿಂದುಸ್ಥಾನ ಇತರ ಜನರ ದೇಶ ಅಲ್ಲ ಎಂದು ತಿಳಿಯಬಾರದು” ಎಂದು ಭಾಗವತ್ ಹೇಳಿದರು.
“ಹಿಂದು ಎನ್ನುವ ಪದ ಭಾರತ ಮಾತೆಯ ಎಲ್ಲ ಮಕ್ಕಳನ್ನು ಒಳಗೊಳ್ಳುತ್ತದೆ; ಇವರೆಲ್ಲ ಭಾರತೀಯ ಪೂರ್ವಜರ ಸಂತಾನ ಮತ್ತು ಅವರೆಲ್ಲರೂ ಭಾರತೀಯ ಸಂಸ್ಕೃತಿ, ಪರಂಪರೆಗೆ ಅನುಗುಣವಾಗಿ ಜೀವಿಸುವವರು’ ಎಂದವರು ಹೇಳಿದರು.
“ಯಾವುದೇ ಒಂದು ಪಕ್ಷ ಅಥವಾ ನಾಯಕ ದೇಶವನ್ನು ಮಹೋನ್ನತ ರಾಷ್ಟ್ರವನ್ನಾಗಿ ಮಾಡಲಾರ. ಅದನ್ನು ದೇಶದ ಒಟ್ಟು ಜನರು ಮಾತ್ರವೇ ಮಾಡಲು ಸಾಧ್ಯ. ಜನರೇ ಒಗ್ಗೂಡಿ ಈ ಬದಲಾವಣೆಯನ್ನು ತರಲು ಸಮಾಜವನ್ನು ಸಿದ್ಧಪಡಿಸಬೇಕಾಗಿದೆ’ ಎಂದವರು ಹೇಳಿದರು.
‘ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲು, ಬಲಿಷ್ಠ ಮತ್ತು ಶ್ರೀಮಂತ ರಾಷ್ಟ್ರವನ್ನಾಗಿ ರೂಪಿಸಲು ದೇಶ ಬಾಂಧವರೆಲ್ಲರೂ ಎಲ್ಲ ಬಗೆಯ ತಾರತಮ್ಯಗಳನ್ನು ನಿರ್ಮೂಲನ ಮಾಡಬೇಕು’ ಎಂದವರು ಹೇಳಿದರು.
ಕಾಲೇಜು ವಿದ್ಯಾರ್ಥಿಗಳಾಗಿರುವ ಆರ್‌ಎಸ್‌ಎಸ್ ಸ್ವಯಂಸ್ವೇಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಭಾಗವತ್ , ಸರಕಾರವೊಂದರಿಂದಲೇ ದೇಶದ ಅಭಿವೃದ್ಧಿಯನ್ನು ಮಾಡಲಾಗದು; ಎಲ್ಲರೂ ಒಗ್ಗೂಡಿ ದೇಶದಲ್ಲಿ ಬದಲಾವಣೆಯನ್ನು ತರಬೇಕಿದೆ ಎಂದು ಹೇಳಿದರು.