ಪಾಟ್ನಾ: ಹಿಂದೂಗಳು ʼಹಲಾಲ್ʼ ಮಾಡಿದ ಮಾಂಸವನ್ನು ಸೇವಿಸಬೇಡಿ, ʼಜಟ್ಕಾʼ ಮಾಂಸವನ್ನು ಸೇವಿಸಿ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಭಾನುವಾರ(ಡಿ.17 ರಂದು) ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಆಹಾರ ಪದ್ಧತಿಗಳು ಮತ್ತು ಹಲಾಲ್ ಮಾಂಸವನ್ನು ಸೇವಿಸುವುದರ ವಿರುದ್ಧ ಪ್ರತಿಜ್ಞೆ ಮಾಡಲು ತಮ್ಮ ಬೆಂಬಲಿಗರಲ್ಲಿ ಪ್ರತಿಜ್ಞೆ ಮಾಡಲು ಹೇಳಿದ್ದಾರೆ.
“ಹಲಾಲ್ ಮಾಂಸವನ್ನು ಮಾತ್ರ ಸೇವಿಸುವ ಮುಸ್ಲಿಮರನ್ನು ನಾನು ಮೆಚ್ಚುತ್ತೇನೆ. ಈಗ ಹಿಂದೂಗಳು ತಮ್ಮದೇ ಆದ ಧಾರ್ಮಿಕ ಸಂಪ್ರದಾಯಗಳಿಗೆ ಇದೇ ರೀತಿಯ ಬದ್ಧತೆಯನ್ನು ಪ್ರದರ್ಶಿಸಬೇಕು. ಹಿಂದೂ ವಧೆ ವಿಧಾನವೆಂದರೆ ಅದು ಜಟ್ಕಾ. ಹಿಂದೂಗಳು ‘ಬಲಿ’ (ಪ್ರಾಣಿಬಲಿ) ಯನ್ನು ಒಂದೇ ಏಟಿನಲ್ಲಿ ಮಾಡುತ್ತಾರೆ. ಅವರು(ಹಿಂದೂಗಳು) ಹಲಾಲ್ ಮಾಂಸವನ್ನು ಸೇವಿಸಬಾರದು. ಅವರು ಯಾವಾಗಲೂ ಜಟ್ಕಾ ಮಾಡಿದ ಮಾಂಸವನ್ನು ಸೇವಿಸಬೇಕೆಂದು” ಹೇಳಿದ್ದಾರೆ.
ಹಿಂದೂಗಳು ಬಿಡುವಿನ ವೇಳೆಯಲ್ಲಿ ಸಂಜೆ ದೇವಾಲಯಕ್ಕೆ ಭೇಟಿ ನೀಡಬೇಕು. “ಸನಾತನ ಧರ್ಮ ಅಥವಾ ಹಿಂದೂ ಧರ್ಮದಷ್ಟು ಉತ್ತಮ ಧರ್ಮ ಬೇರೆ ಯಾವುದೇ ಧರ್ಮವಿಲ್ಲ” ಎಂದು ಅವರು ಹೇಳಿದರು.
ಕೆಲ ವಾರಗಳ ಹಿಂದೆ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದು, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಸ್ಥಾಪಿಸಿದ ಮಾದರಿಯನ್ನು ಅನುಸರಿಸಲು ಮತ್ತು “ಹಲಾಲ್” ಎಂದು ಲೇಬಲ್ ಮಾಡಿದ ಆಹಾರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು.