ಮೂಡಿಗೆರೆ: ಮನುಕುಲದ ಉದ್ಧಾರಕ್ಕಾಗಿ ಸಾವಿರ ವರ್ಷ ಪರಿಪಾಲಿಸಿಕೊಂಡು ಬಂದ ಹಿಂದೂ ಧರ್ಮ ಸರ್ವ ಶ್ರೇಷ್ಠ ಧರ್ಮ. ಈ ಧರ್ಮದ ಬಗ್ಗೆ ಪರಿಕಲ್ಪನೆ ಇಲ್ಲದವರು ಧರ್ಮದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿದರು.
ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ಶ್ರೀ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ಲಲಿತ ಕಲಾಮಂಟಪದಲ್ಲಿ ಮಂಗಳವಾರ ಸಂಜೆ ನಡೆದ ಶ್ರೀ ಮಾತೆಗೆ ದೀಪೋತ್ಸವ ಹಾಗೂ ಪ್ರಹಾಂಗಣ ಪಲ್ಲಕ್ಕಿ ಉತ್ಸವ, ಕೋಟಿ ಕುಂಕುಮಾರ್ಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನ ವೈಜ್ಞಾನಿಕ ಅವಿಷ್ಕಾರವಿಲ್ಲವೆಂಬ ವಾದದಿಂದ ಹಿಂದೂ ಧರ್ಮ ಹೊರಗಿದೆ. ಕೇಸರಿ ಧರ್ಮದ ವಿಚಾರವೇ ತಿಳಿಯದವರು ಧರ್ಮದ ವೈಚಾರಿಕತೆಯನ್ನು ಇತರರಿಗೆ ಸಾರುವ ಕೆಲಸ ಮಾಡುತ್ತಿರುವುದು ದುರಂತ ಎಂದು ಹೇಳಿದರು.
ತಲೆ ಚುರುಕಾಗಿರಬೇಕು. ಹೆಚ್ಚಿನ ಜ್ಞಾನ ಪಡೆಯಬೇಕು ಎಂದುಕೊಳ್ಳಬೇಕೆಂದರೆ ಸಂಸ್ಕೃತ ಕಲಿಯಬೇಕು. ಮುಂದಿನ ದಿನಗಳಲ್ಲಿ ಕಂಪೂಟರ್‌ಗಳಲ್ಲೂ ಸಂಸ್ಕೃತ ಜೋಡಣೆಯಾಗಲಿದೆ. ಇದನ್ನು ಕಲಿತರೆ ಸಾವಿರಾರು ವರ್ಷಗಳ ಇತಿಹಾಸವನ್ನು ಸಂಸ್ಕೃತದಲ್ಲಿಯೇ ಮೆಲುಕು ಹಾಕಬಹುದು. ಅದನ್ನು ಅರಿಯಬೇಕಿದೆ. ಇಲ್ಲವಾದರೆ ನಮಗೆ ನಾವು ಚೌಕಟ್ಟು ಹಾಕಿಕೊಂಡಂತಾಗುತ್ತದೆ. ಜಗತ್ತು ಎಲ್ಲಿ ಹುಟ್ಟಿಕೊಳ್ಳುತ್ತದೆ ಅಲ್ಲಿಯೇ ಅಂತ್ಯಗೊಳ್ಳುತ್ತದೆ. ಇದು ಸೃಷ್ಟಿಯ ಸಿದ್ಧಾಂತ. ಇದನ್ನು ಅರ್ಥ ಮಾಡಿಕೊಂಡವರು ಮಾತ್ರ ಶೂನ್ಯ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಅರ್ಹರು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊರನಾಡು ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಶಿ, ಮನುಷ್ಯನ ಅಂಗಾಗಗಳು ಶುದ್ಧೀಕರಣಗೊಳ್ಳಬೇಕು. ಮನುಷ್ಯ ದೇಹದೊಳಗಿರುವ ಕಣ್ಣುಗಳನ್ನು ತೆರೆಯಲು ಕ್ಷೇತ್ರದಲ್ಲಿ ಶ್ರೀ ಮಾತೆಗೆ ದೀಪೋತ್ಸವ, ಲಕ್ಷ ದುರ್ವಾಚನೆ ಮತ್ತು ಯಕ್ಷಗಾನದ ದಿಗ್ಗಜ ಅಭಿಜಾತ ಕಲಾವಿದ ದಿ| ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಂಸ್ಮರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕಳಸದ ಸರ್ಕಾರಿ ಪ್ರರ್ಥಮ ದರ್ಜೆ ಕಾಲೇಜಿಗೆ ಪೀಠೊಪಕರಣಗಳನ್ನು ವಿತರಿಸಲಾಯಿತು. ಶಾಸಕ ಡಿ.ಎನ್.ಜೀವರಾಜ್, ತಾಪಂ ಅಧ್ಯಕ್ಷ ಕೆ.ಸಿ.ರತನ್, ಮಂಗಳೂರಿನ ಯಕ್ಷಗಾನ ವಿಮರ್ಶಕ ಡಾ|ಎಂ.ಪ್ರಭಾಕರ್ ಜೋಶಿ, ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ, ತಾಪಂ ಸದಸ್ಯ ಎಚ್.ವಿ.ರಾಜೇಂದ್ರ ಪ್ರಸಾದ್ ಮತ್ತಿತರರಿದ್ದರು.