ಕರಾಚಿ: ಪಾಕಿಸ್ಥಾನದಲ್ಲಿರುವ ಹಿಂದೂ ದೇವಾಲಯದಲ್ಲಿನ ದೇವತೆಗಳ ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.ಸೋಮವಾರ ಸಂಜೆ ಕರಾಚಿಯ ಹಳೆಯ ನಗರವಾದ ನಾರಾಯಣಪುರದ ನಾರಾಯಣ ಮಂದಿರದಲ್ಲಿ ಈ ಘಟನೆ ನಡೆದಿದೆ.
ಮುಹಮ್ಮದ್ ವಲೀದ್ ಶಬ್ಬೀರ್ ಎಂದು ಗುರುತಿಸಲಾದ ವ್ಯಕ್ತಿಯನ್ನು ದೇವತೆಗಳ ಪ್ರತಿಮೆಗಳನ್ನು ಹಾನಿಗೊಳಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸರ್ಫರಾಜ್ ನವಾಜ್ ತಿಳಿಸಿದ್ದಾರೆ.
” ಹಿಂದೂ ದೇವತೆಗಳ ಪ್ರತಿಮೆಗಳಿಗೆ ಸುತ್ತಿಗೆಯಿಂದ ಹಾನಿ ಮಾಡುವುದನ್ನು ನೋಡಿ ಮುಕೇಶ್ ಕುಮಾರ್ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಕೋಪಗೊಂಡ ಹಿಂದೂಗಳು ದೇವಸ್ಥಾನದಲ್ಲಿದ್ದ ದುಷ್ಕರ್ಮಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.ನಂತರ ಆ ಪ್ರದೇಶದ ಹಿಂದೂ ನಿವಾಸಿಗಳು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ, ಹಿಂದೂಗಳಿಗೆ ಭದ್ರತೆ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಿಂದೂಗಳು ಪಾಕಿಸ್ಥಾನದಲ್ಲಿ ಅಲ್ಪಸಂಖ್ಯಾತ ಸಮುದಾಯವಾಗಿದ್ದು, ಅಧಿಕೃತ ಅಂದಾಜಿನ ಪ್ರಕಾರ 75 ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. ಆದಾಗ್ಯೂ, ಸಮುದಾಯದ ಪ್ರಕಾರ, 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ಇದ್ದಾರೆ ಎನ್ನಲಾಗಿದೆ.
ಪಾಕ್ ನ ಬಹುಪಾಲು ಹಿಂದೂ ಜನಸಂಖ್ಯೆ ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದ್ದು, ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯನ್ನು ಹಂಚಿಕೊಳ್ಳುತ್ತಿದ್ದಾರಾದರೂ ನಿರಂತರವಾಗಿ ಉಗ್ರಗಾಮಿಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.