ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನದಲ್ಲಿ ವೇದಮಂತ್ರಗಳ ಘೋಷ ಮೊಳಗಿದೆ.
ಜನರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿ ಅರ್ಚಕರು, ‘ಶಾಂತಿ ಪಾಠ’ ವೇದ ಮಂತ್ರ ಪಠಿಸಿದ್ದಾರೆ. ವೈಟ್‌ಹೌಸ್‌ನ ರೋಸ್‌ಗಾರ್ಡನ್‌ನಲ್ಲಿ ರಾಷ್ಟ್ರೀಯ ಪ್ರಾರ್ಥನಾ ಸೇವಾ ದಿನ ಆಚರಿಸಲಾಯಿತು.
ಕೋವಿಡ್ ಸೋಂಕಿನ ಭೀತಿ ಬೇಗ ದೂರವಾಗಿ, ಆರೋಗ್ಯ- ಶಾಂತಿ ಚಿರಸ್ಥಾಯಿ ಆಗಲಿಯೆಂದು ಪ್ರಾರ್ಥಿಸಲು, ಆರ್ಚಕರಿಗೆ ಆಹ್ವಾನ ನೀಡಲಾಗಿತ್ತು.
ನ್ಯೂಜೆರ್ಸಿಯ ಸ್ವಾಮಿ ನಾರಾಯಣ ಮಂದಿರದ ಅರ್ಚಕ ಹರೀಶ್ ಬ್ರಹ್ಮಭಟ್, ಸಂಸ್ಕೃತದಲ್ಲಿ ಶಾಂತಿ ಪಾಠ ಹೇಳಿ, ಅನಂತರ ಅದರ ಅರ್ಥವನ್ನು ಇಂಗ್ಲಿಷ್‌ಗೆ ತರ್ಜುಮೆಗೊಳಿಸಿದರು.
‘ಇದು ಮನುಕುಲದ ಶಾಂತಿಗಾಗಿ ಬೋಧಿಸುವ ಸುಂದರ ಶಾಂತಿ ಪಾಠ. ಯಜುರ್ವೇದದ ಅನುಸಾರವಾಗಿ ಆಕಾಶ, ಭೂಮಿ, ಸಕಲ ಜೀವರಾಶಿ- ಎಲ್ಲೆಲ್ಲೂ ಶಾಂತಿ ನೆಲೆಸುವಂತೆ ಪ್ರಾರ್ಥಿಸಲಾಗಿದೆ’ ಎಂದು ಬ್ರಹ್ಮ ಭಟ್ ಹೇಳಿದ್ದಾರೆ.
“ಅಮೆರಿಕ ಮೊದಲಿಂದಲೂ ಪ್ರಾರ್ಥನೆಯ ರಾಷ್ಟ್ರ. ಭಾರತೀಯ ನಂಬಿಕೆಗೆ ಅನುಸಾರವಾಗಿ, ಪ್ರಾರ್ಥನಾ ದಿನ ಆಚರಿಸಿದ್ದೇವೆ’ ಎಂದು ಅಮೆರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ಎಂದು ತಿಳಿಸಿದ್ದಾರೆ.