ಬೆಂಗಳೂರು: ಅಲ್ಪಸಂಖ್ಯಾಕರ ಬಡಾವಣೆಗಳ ಅಭಿವೃದ್ಧಿಗೆ 11 ಸಾವಿರ ಕೋಟಿ ರೂ.ನೀಡುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ರೀತಿಯಲ್ಲೇ ಹಿಂದೂ-ಮುಸ್ಲಿಮರನ್ನು ಪ್ರತ್ಯೇಕಿಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಒಂದೇ ವಾರದಲ್ಲಿ ಪ್ರತಿ ರೈತರಿಗೆ 2 ಸಾವಿರ ರೂ. ನೀಡುತ್ತೇನೆ ಎಂದು ಘೋಷಿಸಿದ್ದ ಸಿಎಂಗೆ ರೈತರ ಖಾತೆಗೆ ಹಣ ಹಾಕುವ ಯೋಗ್ಯತೆ ಇಲ್ಲ. ಆದರೆ 11 ಸಾವಿರ ಕೋಟಿ ರೂ.ಅನ್ನು ಅಲ್ಪಸಂಖ್ಯಾಕರ ಬಡಾವಣೆಗೆ ಖರ್ಚು ಮಾಡಲು ಮುಂದಾಗಿದ್ದಾರೆ ಎಂದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಅಲ್ಪಸಂಖ್ಯಾಕರಿಗೆ ಕಾಣಿಕೆ ಮೇಲೆ ಕಾಣಿಕೆ ನೀಡುತ್ತಿದ್ದರೆ, ಬರಗಾಲದಿಂದ ನೊಂದ ರೈತರಿಗೆ ನೇಣಿನ ಕುಣಿಕೆ ನೀಡಿದೆ. ಸಾಲ ತೀರಿಸಲಾಗದೆ ಏಳು ತಿಂಗಳಲ್ಲಿ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಲ್ಪಸಂಖ್ಯಾಕರಿಗೆ ಈ ಹಿಂದೆ 10 ಸಾವಿರ ಕೋಟಿ ರೂ. ಘೋಷಿಸಿದ್ದ ಅವರು ಈಗ 1 ಸಾವಿರ ಕೋಟಿ ರೂ. ಸೇರಿ 11 ಸಾವಿರ ಕೋಟಿ ರೂ. ಅನುದಾನ ನೀಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿಗೆ ಸಿಗುವುದೇ 50ರಿಂದ 60 ಸಾವಿರ ಕೋಟಿ ರೂಪಾಯಿ. ಅದರಲ್ಲಿ 11 ಸಾವಿರ ಕೋಟಿ ರೂ.ಯನ್ನು ಅಲ್ಪಸಂಖ್ಯಾಕರ ಪ್ರದೇಶಗಳಿಗೆ ನೀಡಿದರೆ ಹಿಂದೂಗಳ ಕಾಲನಿ ಎರಡನೇ ದರ್ಜೆಯದಾ? ದಲಿತರು ಇರುವ ಕಾಲನಿಗಳ ಪಾಡೇನು ಎಂದು ಪ್ರಶ್ನಿಸಿದರು.
ನಾಮ ಹಾಕಿದ ಸಚಿವರು
ಸಚಿವ ಮಧು ಬಂಗಾರಪ್ಪ ಚೆಕ್ ಬೌನ್ಸ್ ಮಾಡಿ ಯಾರಿಗೋ ನಾಮ ಹಾಕಿದ್ದಾರೆ. ಕೋರ್ಟ್ ಆದೇಶ ಬಂದ ಬಳಿಕವೂ ಆ ಸಚಿವರ ರಾಜೀನಾಮೆ ಪಡೆಯದೆ ಸಿಎಂ ಸಮರ್ಥಿಸಿ ಕೊಳ್ಳುತ್ತಿದ್ದಾರೆ. ಕೂಡಲೇ ಅವರ ರಾಜೀನಾಮೆ ಪಡೆಯಬೇಕೆಂದು ಅಶೋಕ್ ಆಗ್ರಹಿಸಿದರು.