Advertisement

NIA: ಹಿಂದೂ ಮುಖಂಡರ ಹತ್ಯೆ ಸಂಚು ಕೇಸ್‌; ಶಂಕಿತ ಉಗ್ರರ ವಿರುದ ಚಾರ್ಜ್‌ಶೀಟ್‌

10:09 AM Aug 20, 2024 | Team Udayavani |

ಬೆಂಗಳೂರು: ಅಲ್‌-ಹಿಂದ್‌ ಸಂಘಟನೆ ಕಟ್ಟಿಕೊಂಡು ಹಿಂದೂ ಮುಖಂಡರು ಹಾಗೂ ಪೊಲೀಸ್‌ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ ಐಎ) ಅಧಿಕಾರಿಗಳು ಇಬ್ಬರು ಶಂಕಿತರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ.

Advertisement

ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಿವಮೊಗ್ಗದ ತೀರ್ಥಹಳ್ಳಿಯ ಅಬ್ದುಲ್‌ ಮತೀನ್‌ ತಾಹಾ ಮತ್ತು ಮುಸಾವೀರ್‌ ಹುಸೇನ್‌ ಶಾಜೀಬ್‌ ವಿರುದ್ಧ ಸೋಮ ವಾರ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಈ ಮೂಲಕ ಇದೇ ಪ್ರಕರಣದಲ್ಲಿ ಇದುವರೆಗೂ 18 ಮಂದಿ ಶಂಕಿತರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದಂತಾಗಿದೆ.

ಶಂಕಿತರ ವಿರುದ್ಧ 2020ರ ಜನವರಿಯಲ್ಲಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಆರೋಪಿಗಳು ತಲೆಮರೆಸಿಕೊಂಡಿದ್ದು, 2024ರ ಮಾರ್ಚ್‌ 1ರಂದು ನಡೆದ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್‌ 12ರಂದು ಈ ಇಬ್ಬರು ಶಂಕಿತರನ್ನು ಪಶ್ಚಿಮ ಬಂಗಾಳದ ಕೊಲ್ಕೊತ್ತಾದಲ್ಲಿ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 2020ರಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಈ ಇಬ್ಬರು ಶಂಕಿತರ ವಿಚಾರಣೆ ನಡೆಸಿದ್ದು, ಇದೀಗ ಅವರ ಹೇಳಿಕೆ ಆಧರಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಇನ್ನು ಎನ್‌ಐಎ ತನಿಖೆಯಲ್ಲಿ ಅಬ್ದುಲ್‌ ಮತೀನ್‌ ತಾಹಾ ಮೂಲಭೂತವಾದಿಯಾ ಗಿದ್ದು, ಮುಸಾ ವೀರ್‌ ಹುಸೇನ್‌ ಶಾಜೀಬ್‌ ಹಾಗೂ ಇತರ ರನ್ನು 2018ರಲ್ಲಿ ಅಲ್‌-ಹಿಂದ್‌ ಸಂಘಟನೆಗೆ ಸೇರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆನ್‌ ಲೈನ್‌ ಹ್ಯಾಂಡ್ಲರ್‌ ಭಾಯಿ ಅಲಿಯಾಸ್‌ ಲ್ಯಾಪ್‌ಟಾಪ್‌ ಭಾಯ್‌ ಎಂಬಾತನನ್ನು ಪರಿಚಯಿಸಿದ್ದ. ಅಲ್ಲದೆ, ಆಲ್‌ಲೈನ್‌ ಹ್ಯಾಂಡ್ಲರ್‌ ಭಾಯಿ ಅನ್ನು ಅಲ್‌-ಹಿಂದ್‌ ಸಂಘಟನೆಯ ದಕ್ಷಿಣ ಭಾರತದ ಮುಖಂಡ ಮೆಹಬೂಬ್‌ ಪಾಷಾನಿಗೂ ತಾಹಾ ಪರಿಚಯಿಸಿದ್ದ. ಈ ಮೆಹಬೂಬ್‌ ಪಾಷಾ, ಸಂಘಟನೆ ಆನ್‌ಲೈನ್‌ ಹ್ಯಾಂಡ್ಲರ್‌ ಅನ್ನು ಖ್ವಾಜಾ ಮೊಹಿನುದ್ದಿನ್‌ ಗೂ ಪರಿಚಯಿಸಿಕೊಟ್ಟಿದ್ದ ಎಂದು ಎನ್‌ಐಎ ತಿಳಿಸಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next