Advertisement

ಹೆಸರಿಗೆ ನಮ್ಮ ಮೆಟ್ರೋ…ಆದರೆ ಅಲ್ಲಿ ನಮ್ಮವರಿಲ್ಲ…

08:29 AM Nov 02, 2019 | Sriram |

ಬೆಂಗಳೂರು: ಇದು ಹೆಸರಿಗೆ ನಮ್ಮ ಮೆಟ್ರೋ. ಆದರೆ, ಇದರಲ್ಲಿ ಕೆಲಸ ಮಾಡುವ ಬಹುತೇಕರು ನಮ್ಮವರಲ್ಲ!

Advertisement

ನಿಲ್ದಾಣಗಳ ಹೊರಗೆ ತೂಗುಹಾಕಿರುವ ಹಿಂದಿ ಫ‌ಲಕಗಳ ವಿರುದ್ಧ ಕನ್ನಡಪರ ಸಂಘಟನೆಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ದೊಡ್ಡ ದನಿ ಎತ್ತಿತು. ಆ ಮೂಲಕ ಬಾಹ್ಯವಾಗಿ ಹಿಂದಿ ಹೇರಿಕೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. ಆದರೆ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಒಳಗೆ ಸದ್ದಿಲ್ಲದೆ ಹಿಂದಿ ನುಸುಳುತ್ತಿದೆ. ಬ್ಯಾಂಕಿಂಗ್‌, ರೈಲ್ವೆಯಂತಹ ವಿವಿಧ ಇಲಾಖೆಗಳ ನೇಮಕಾತಿಯಲ್ಲಿನ ಉತ್ತರ ಭಾರತದ ಪ್ರಾಬಲ್ಯವು ನಿಧಾನವಾಗಿ ನಿಗಮಕ್ಕೂ ವಿಸ್ತರಣೆ ಆಗುತ್ತಿದೆ. ಈ ಮೂಲಕ ಆಯಕಟ್ಟಿನ ಜಾಗಗಳಲ್ಲಿ ಕನ್ನಡಿಗರ ದನಿ ಕುಗ್ಗುತ್ತಿದೆ.

ಮೂಲಗಳ ಪ್ರಕಾರ ಮೆಟ್ರೋ ಯೋಜನೆ ಮತ್ತು ಪ್ರಾಜೆಕ್ಟ್ ವಿಭಾಗದಲ್ಲಿ ಕಾರ್ಯನಿರ್ವಹಿಸುವವರ ಪೈಕಿ ಶೇ. 70ಕ್ಕೂ ಅಧಿಕ ಅನ್ಯಭಾಷಿಕರೇ ಇದ್ದಾರೆ. ಪ್ರಮುಖ ಹುದ್ದೆಗಳು ರೈಲ್ವೆ ಇಲಾಖೆಯಲ್ಲಿ ನಿವೃತ್ತರಾದವರು, ಸ್ವಯಂ ನಿವೃತ್ತಿ ತೆಗೆದುಕೊಂಡವರು, ನಿಯೋಜನೆಯಾಗಿ ಬಂದವರು, ಗುತ್ತಿಗೆದಾರರ ಮೂಲಕ ನುಸುಳಿದವರ ಪಾಲಾಗುತ್ತಿವೆ. ಈ ಪೈಕಿ ಕೆಲವರಿಗೆ ಅರ್ಹತೆ ಇಲ್ಲದಿದ್ದರೂ ಯಾವುದೇ ನೋಟಿಫಿಕೇಷನ್‌ ಹೊರಡಿಸದೆ “ಪ್ರಭಾವ’ ಬೀರಿ ಉನ್ನತ ಹುದ್ದೆಗಳಿಗೆ ನೇರ ನೇಮಕಗೊಳ್ಳುತ್ತಿದ್ದಾರೆ. ಹೀಗೆ ಅನರ್ಹರು ತಮ್ಮ ಮೇಲೆ ಬಂದು ಕೂರುವುದರಿಂದ ಕನ್ನಡಿಗರು ಅವಕಾಶ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ನಿಗಮದ ವಲಯದಲ್ಲೇ ಕೇಳಿಬರುತ್ತಿದೆ.

ಕಳೆದ ಮೂರ್‍ನಾಲ್ಕು ವರ್ಷಗಳಲ್ಲಿ ಯೋಜನಾ ವಿಭಾಗ, ಪ್ರಾಜೆಕ್ಟ್, ಎಲೆಕ್ಟ್ರಿಕಲ್‌, ರೋಲಿಂಗ್‌ ಸ್ಟಾಕ್‌, ಸಿಗ್ನಲಿಂಗ್‌ ಮತ್ತಿತರ ವಿಭಾಗಗಳಿಂದ ನೂರಾರು ಜನ ಬಿಟ್ಟುಹೋಗುತ್ತಿದ್ದಾರೆ. ಅವರೆಲ್ಲಾ ಈಗ ಹೈಸ್ಪೀಡ್‌ ರೈಲು, ಅಹಮದಾಬಾದ್‌, ಪುಣೆ ಸೇರಿದಂತೆ ಹಲವು ಮೆಟ್ರೋ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕನ್ನಡಿಗರು “ನಮ್ಮ ಮೆಟ್ರೋ’ದಿಂದ ವಿಮುಖರಾಗಲು ಕಾರಣ ಕರಿಯರ್‌ ಬೆಳವಣಿಗೆ ಇಲ್ಲದಿರುವುದು, ಸೂಕ್ತ ಸೌಲಭ್ಯಗಳನ್ನು ನೀಡದಿರುವುದು ಹಾಗೂ ಅನನುಭವಿಗಳನ್ನು ತಮ್ಮ ಮೇಲೆ ತಂದು ಕೂರಿಸುತ್ತಿರುವುದು. ಅನುಭವಿಗಳು ಹೀಗೆ ಬೇರೆ ಕಡೆಗೆ ಹೋಗುತ್ತಿರುವುದರಿಂದ ಇದರ ಪರಿಣಾಮ ಯೋಜನೆ ಪ್ರಗತಿ ಮೇಲೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

Advertisement

“ಕೇಳಿದ್ರೆ ಟಾರ್ಗೆಟ್‌ ಆಗುವ ಭಯ’
“ಭದ್ರತೆ, ವೇತನ ಬಡ್ತಿ, ರಜೆ ಮತ್ತಿತರ ಸೌಲಭ್ಯಗಳಂತೂ ನಿಯಮಿತವಾಗಿ ಸಿಗುವುದಿಲ್ಲ. ಬಡ್ತಿ ವಿಚಾರದಲ್ಲಂತೂ ಯಾವುದೇ ನಿಯಮಾವಳಿಗಳಿಲ್ಲ. ಹತ್ತು ವರ್ಷಗಳ ಹಿಂದೆ ಜನರಲ್‌ ಕನ್ಸಲ್ಟಂಟ್‌ನಲ್ಲಿ ಸಹಾಯಕ ಎಂಜಿನಿಯರ್‌ಗಿಂತ ಕೆಳಗಿದ್ದವರು ಇಂದು ಹೆಚ್ಚುವರಿ ಎಂಜಿನಿಯರ್‌ ಆಗಿದ್ದಾರೆ. ಈಗ ಅವರ ಕೆಳಗಡೆ ನಾವು ಕೆಲಸ ಮಾಡಬೇಕಾಗಿದೆ. ಈ ತಾರತಮ್ಯಗಳ ಬಗ್ಗೆ ಪ್ರಶ್ನಿಸಿದರೆ, ನಾವೇ ಟಾರ್ಗೆಟ್‌ ಆಗುತ್ತೇವೆ. ಯಾಕೆಂದರೆ, ಸಂಘಟನೆ ನಮ್ಮಲ್ಲಿ ಇಲ್ಲವಾಗಿದೆ. ಗುತ್ತಿಗೆ ಪದ್ಧತಿಯನ್ನೂ ಸರಿಯಾಗಿ ಅನುಸರಿಸದಿರುವುದರಿಂದ ಬೇಸತ್ತು ಬಿಟ್ಟುಹೋಗುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ಯೋಜನಾ ವಿಭಾಗದ ಎಂಜಿನಿಯರೊಬ್ಬರು ಅಲವತ್ತುಕೊಂಡರು.

ನಿವೃತ್ತರ ಸ್ವರ್ಗವಾದ ನಿಗಮ
“ಸಹಾಯಕ ಎಂಜಿನಿಯರ್‌ನಿಂದ ಹಿಡಿದು ಪ್ರಧಾನ ವ್ಯವಸ್ಥಾಪಕ ಹುದ್ದೆವರೆಗೂ ವಿವಿಧ ಹಂತಗಳಲ್ಲಿ ಈ ತಾರತಮ್ಯ ಅನುಸರಿಸಲಾಗುತ್ತಿದೆ. ಮಾನವ ಸಂಪನ್ಮೂಲ ವಿಭಾಗದಲ್ಲಿ ಪ್ರಮುಖ ಹುದ್ದೆಗಳಿಗೆ ಕನಿಷ್ಠ ಸ್ನಾತಕೋತ್ತರ ಪೂರೈಸಿರಬೇಕು. ಕೊನೆಪಕ್ಷ ಸೇವಾನುಭವ ಇದ್ದವರನ್ನಾದರೂ ನೇಮಕ ಮಾಡಬೇಕಿತ್ತು. ಆದರೆ, ಕೇವಲ ಪದವಿ ಪೂರೈಸಿದವರನ್ನು ತಂದು ಕೂರಿಸಲಾಗಿದೆ. ಇದೇ ರೀತಿ ವಿವಿಧ ವಿಭಾಗಗಳಲ್ಲಿ 300ಕ್ಕೂ ಅಧಿಕ ಜನ ಇದ್ದಾರೆ. ಇದರಲ್ಲಿ ಶೇ. 50ರಷ್ಟು ಸಿಬ್ಬಂದಿ 60 ವರ್ಷ ಮೇಲ್ಪಟ್ಟವರು’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ದೆಹಲಿ ಮೆಟ್ರೋದಲ್ಲಿ ಯೋಜನೆ ಆರಂಭದಲ್ಲಿ ಮಾತ್ರ ಹೊರಗಡೆಯಿಂದ ಅನುಭವಿಗಳನ್ನು ತಂದರು. ನಂತರದಲ್ಲಿ ಐಐಐಟಿ ಮತ್ತಿತರ ಕಡೆಗಳಿಂದ ನೇಮಕ ಮಾಡಿಕೊಂಡರು. ಈಗ ಅವರೇ 10-15 ವರ್ಷ ಅನುಭವಿಗಳಾಗಿ ಹೊರಹೊಮ್ಮಿದ್ದಾರೆ. ಆದರೆ, ನಮ್ಮಲ್ಲಿ ಆ ವ್ಯವಸ್ಥೆಯೇ ಇಲ್ಲ. ಈಗಲೂ ಹೊರಗಿನವರನ್ನು ಅವಲಂಬಿಸಿದ್ದೇವೆ ಎಂದು ಮತ್ತೂಬ್ಬ ಅಧಿಕಾರಿ ತಿಳಿಸಿದರು.

ಒಂದೆಡೆ ಅನುಭವಿ ಕನ್ನಡಿಗರ ವಲಸೆ ಮತ್ತೂಂದೆಡೆ ಅನನುಭವಿಗಳ ಸೇರ್ಪಡೆಯು ಯೋಜನೆ ಪ್ರಗತಿ ಮೇಲೆ ಪರಿಣಾಮ ಬೀರುತ್ತಿದೆ. “ನಮ್ಮ ಮೆಟ್ರೋ’ ಎರಡನೇ ಹಂತದ ವಿಸ್ತರಣಾ ಮಾರ್ಗಗಳನ್ನು 2015-16ರಲ್ಲೇ ಟೆಂಡರ್‌ ನೀಡಲಾಗಿದೆ. ಆದರೆ, ಇದುವರೆಗೆ ಒಂದೇ ಒಂದು ಮಾರ್ಗವು ಸೇವೆಗೆ ಮುಕ್ತಗೊಳ್ಳುವ ಹಂತಕ್ಕೂ ಬಂದಿಲ್ಲ. ಈ ವಿಳಂಬದಿಂದ ಯೋಜನಾ ವೆಚ್ಚ ಏರಿಕೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ದೆಹಲಿ ಮೆಟ್ರೋ ರೈಲು ನಿಗಮಕ್ಕೆ ಹೆಚ್ಚು-ಕಡಿಮೆ 15 ವರ್ಷಗಳಾಗಿದ್ದು, ಅಲ್ಲಿ ಇದುವರೆಗೆ ಇಬ್ಬರು ವ್ಯವಸ್ಥಾಪಕ ನಿರ್ದೇಶಕರಾಗಿ ಹೋಗಿದ್ದಾರೆ. ಆದರೆ, ನಮ್ಮ ಮೆಟ್ರೋದಲ್ಲಿ 10-12 ವರ್ಷಗಳಲ್ಲಿ ಆರು ಜನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇದು ಕೂಡ ಯೋಜನೆ ಪ್ರಗತಿ ಮೇಲೆ ಪರಿಣಾಮ ಬೀರಲು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನೋಟಿಫಿಕೇಷನ್‌ ಹೊರಡಿಸದೆ, ನಿಯಮಬಾಹಿರವಾಗಿ ಯಾವುದೇ ನೇಮಕಾತಿ ಮಾಡಿಲ್ಲ. ಅನುಭವದ ಆಧಾರದ ಮೇಲೆ ರೈಲ್ವೆಯಿಂದ ನಿವೃತ್ತರಾದ ನೂರಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿದ್ದು ಹೌದು. ಆದರೆ, ಅದನ್ನೂ ನಿಯಮದ ಪ್ರಕಾರ ಮಾಡಲಾಗಿದೆ. ಅಷ್ಟಕ್ಕೂ ಅವರೆಲ್ಲಾ ನಿಗಮದ ಆರಂಭದಿಂದಲೂ ಇದ್ದಾರೆ. ಮುಖ್ಯ ಎಂಜಿನಿಯರ್‌ ಹಂತದವರು ಬೇಕಾಗುತ್ತದೆ. ಅಂತಹವರಾರೂ ಬರದಿದ್ದಾಗ ಏನು ಮಾಡೋದು?
– ಅಜಯ್‌ ಸೇಠ್ ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next