Advertisement

ಹೋರಾಟಕ್ಕೆ ಕಿಚ್ಚು ಹೊತ್ತಿಸಿದ ಹಿಂದಿ ಬಳಕೆ

11:25 AM Jun 26, 2017 | |

ಬೆಂಗಳೂರು: ಬಲವಂತವಾಗಿ ಹಿಂದಿ ಹೇರುತ್ತಿರುವ ನಮ್ಮ ಮೆಟ್ರೋ, ಬ್ಯಾಂಕುಗಳು ಹಾಗೂ ಹಿಂದಿ ರಾಷ್ಟ್ರಭಾಷೆ ಎಂದಿರುವ ಕೇಂದ್ರ ಸಚಿವ ವೆಂಕಯ್ಯನಾಯ್ಡು ವಿರುದ್ಧ ಕನ್ನಡಪರ ಸಂಘಟನೆ ಆಕ್ರೋಶ ವ್ಯಕ್ತಪಡಿಸಿವೆ. 

Advertisement

ನಗರದ ಆನಂದರಾವ್‌ ವೃತ್ತದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಪುರಭವನದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ, ಬನವಾಸಿ ಬಳಗ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ವಿವಿಧ ಕನ್ನಡಪರ ಆಕ್ರೋಶ ವ್ಯಕ್ತಪಡಿಸಿದವು.

ವೆಂಕಯ್ಯ ನಾಯ್ಡು ಭೂತ ದಹಿಸಿದ ಬಳಿಕ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿಎ. ನಾರಾಯಣ ಗೌಡ, ಕರ್ನಾಟಕದಿಂದ ಮೂರು ಬಾರಿ ಸಂಸತ್ತಿಗೆ ಆಯ್ಕೆಯಾಗಿರುವ ಕೇಂದ್ರ ಸಚಿವ ವೆಂಕಯ್ಯನಾಯ್ಡು, ದಾಖಲೆ ಇಲ್ಲದೆ ಭಾಷೆಯನ್ನು ರಾಷ್ಟ್ರ ಭಾಷೆಯೆಂದು ಹೇಳುತ್ತಿದ್ದಾರೆ. ಕನ್ನಡ ವಿರೋಧಿಯಾಗಿರುವ ನಾಯ್ಡು ಒಬ್ಬ ದೇಶ ದೋಹ್ರಿಯಾಗಿ ಸಂವಿಧಾನದ ಒಗ್ಗಟ್ಟನ್ನು ಒಡೆದು ಹಾಕುತ್ತಿದ್ದಾರೆ. ಈ ಹೇಳಿಕೆ ನೀಡಿರುವ ನಾಯ್ಡು ಅವರು ಕರ್ನಾಟಕಕ್ಕೆ ಹೇಗೆ ಬರುತ್ತಾರೆ ಎಂಬುದನ್ನು ನೋಡುತ್ತೇವೆ ಎಂದು ಎಂಬ ಎಚ್ಚರಿಸಿದರು.

ನಾಮಫ‌ಲಕಕ್ಕೆ ಮಸಿ: ಮೆಟ್ರೋದಲ್ಲಿ ಉಪಯೋಗಿಸುತ್ತಿರುವ ಹಿಂದಿ ನಾಮಫ‌ಲಕವನ್ನು ಈ ಕೂಡಲೇ ತೆಗೆದುಹಾಕಬೇಕು. ಒಂದು ವಾರದೊಳಗೆ ಹಿಂದಿ ನಾಮಫ‌ಲಕ ತೆರವು ಮಾಡದಿದ್ದಲ್ಲಿ ಮೆಟ್ರೋ ನಿಲ್ದಾಣಕ್ಕೆ ನುಗ್ಗಿ ಮಸಿ ಬಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪುರಭವನದಲ್ಲಿ ಪ್ರತಿಭಟನೆ: ಪುರಭವನದಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಹಿಂದಿ ಭಾಷಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪರೋಕ್ಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಾಗೂ ನಮ್ಮ ಮೆಟ್ರೋ ರೈಲು, ಬ್ಯಾಂಕುಗಳಲ್ಲಿ ಹಿಂದಿ ಭಾಷೆ ಹೇರುತ್ತಿವೆ. ಬ್ಯಾಂಕುಗಳಲ್ಲಿ ಹಿಂದಿ ಭಾಷಿಕರಿಗೆ ಹೆಚ್ಚಿನ ಆದ್ಯತೆ ನೀಡಿ ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಎಲ್ಲ ಕ್ಷೇತ್ರಗಳಲ್ಲಿ ಹಾಗೂ ರಾಜ್ಯಗಳಲ್ಲಿ ಹಿಂದಿ ಹೇರಿ ಪ್ರಧಾನ ಭಾಷೆ ಮಾಡಿದ ಬಳಿಕ ರಾಷ್ಟ್ರಭಾಷೆಯಾಗಿ ಘೋಷಿಸುವ ಹುನ್ನಾರ ಅಡಗಿದೆ. ಈ ಮೂಲಕ ರಾಜ್ಯ ರಾಜ್ಯಗಳ ನಡುವೆ ಭಾಷೆ ವಿಚಾರದಲ್ಲಿ ಹುಳಿ ಹಿಂಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಬಹು ಸಂಸ್ಕೃತಿ, ಬಹು ಪದ್ಧತಿ ರಾಷ್ಟ್ರದಲ್ಲಿ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ ಎಂದರು.

ಬೇರೆ ಭಾಷೆಗಳನ್ನು ಅಳವಡಿಸುತ್ತೀರಾ?: ಬೆಂಗಳೂರಿನಲ್ಲಿ ಕೇವಲ ಹಿಂದಿ ಭಾಷಿಕರಲ್ಲ, ತಮಿಳು, ತೆಲುಗು, ಮರಾಠಿ ಸೇರಿದಂತೆ ಹಲವಾರು ಭಾಷಿಕರು ನೆಲೆಸಿದ್ದಾರೆ. ಹಾಗಾದರೆ, ಎಲ್ಲ ಭಾಷೆಗಳನ್ನೂ ಅಳವಡಿಸಿಕೊಳ್ಳಬೇಕೆ ಎಂದು ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು. ತ್ರಿಭಾಷಾ ಸೂತ್ರ ಅಳವಡಿಸಿಕೊಳ್ಳಿ ಎಂದು ಹೇಳುವ ಕೇಂದ್ರ ಸರ್ಕಾರ, ದೆಹಲಿ ಮೆಟ್ರೋದಲ್ಲಿ ಹಿಂದಿಯಲ್ಲಿ ಮಾತ್ರ ಏಕೆ ನಾಮಫ‌ಲಕಗಳನ್ನು ಹಾಕಿದೆ. ದೆಹಲಿಯಲ್ಲಿಯೂ ಸಂವಿಧಾನದ 22 ಭಾಷೆಗಳಲ್ಲಿಯೂ ನಾಮಫ‌ಲಕಗಳನ್ನು ಹಾಕಲಿ ಎಂದು ಆಗ್ರಹಿಸಿದರು.

ಕನ್ನಡಕ್ಕೆ ಸ್ಥಾನಮಾನ ನೀಡದಿದ್ದರೆ ಒಕ್ಕೂಟ ವ್ಯವಸ್ಥೆ ಎಂದು ಕರೆಯಲು ಹೇಗೆ ಸಾಧ್ಯ, ಕೇಂದ್ರ ಸರ್ಕಾರಗಳು ಇದೇ ರೀತಿ ಹಿಂದಿ ಹೇರಿಕೆ ಮುಂದುವರಿಸಿದರೆ, ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಂಘಟನೆ ಅಧ್ಯಕ್ಷ ಎಂ. ತಿಮ್ಮಯ್ಯ, ಕನ್ನಡಪರ ಹೋರಾಟಗಾರರಾದ ಡಾ. ಕೋ.ವೆಂ. ರಾಮಕೃಷ್ಣ, ಗುಡ್ಡದಹಳ್ಳಿ ಕೃಷ್ಣಪ್ಪ, ರಾಮೇಗೌಡ ಸೇರಿದಂತೆ ಹಲವಾರು ಹೋರಾಟಗಾರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next