Advertisement

ಹಿಂದಿನಿಂದ ಬಂತು ಹಿಂದಿ ಬೆದರಿಕೆ!

12:00 PM Aug 08, 2017 | Team Udayavani |

ಬೆಂಗಳೂರು: “ಹಿಂದಿ ರಾಷ್ಟ್ರೀಯ ಭಾಷೆ. ಆದ್ದರಿಂದ ನೀವು ಹಿಂದಿ ಕಲಿಯಲೇಬೇಕು. ನೀವು ದೇಶದಲ್ಲಿ ಇರಬೇಕು ಎಂದಾದರೆ, ಹಿಂದಿ ಕಲಿಯಲೇಬೇಕು…’
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅವರಿಗೆ ಕೆಲ ಕಿಡಿಗೇಡಿಗಳು ಕಳಿಸಿರುವ ಬೆದರಿಕೆ ಪತ್ರಗಳಲ್ಲಿ ಈ ರೀತಿಯ “ಹಿಂದಿ ಹೇರಿಕೆ’ ಸಾಲುಗಳೇ ಮೇಳೈಸುತ್ತಿವೆ!

Advertisement

“ನಮ್ಮ ಮೆಟ್ರೋ’, ಬ್ಯಾಂಕ್‌ಗಳು ಸೇರಿದಂತೆ ವಿವಿಧೆಡೆ ಹಿಂದಿ ಹೇರಿಕೆಯನ್ನು ವಿರೋಧಿಸುವುದರ ಜತೆಗೆ ಪ್ರಾಧಿಕಾರದ ಅಧ್ಯಕ್ಷರು, ಹಿಂದಿ ನಾಮಫ‌ಲಕಗಳ ತೆರವಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಮತ್ತು ಮುಖ್ಯಮಂತ್ರಿಗೆ ಪತ್ರ ಕೂಡ ಬರೆದಿದ್ದರು. ಅದರಲ್ಲೂ ಮುಖ್ಯವಾಗಿ ಹೋರಾಟದ ಫ‌ಲವಾಗಿ ಮೆಟ್ರೋ ನಿಲ್ದಾಣಗಳಲ್ಲಿನ ಹಿಂದಿ ನಾಮಫ‌ಲಕಗಳು ತೆರವಾದ ಬೆನ್ನಲ್ಲೇ  ರೀತಿಯ ಬೆದರಿಕೆಯ ಪತ್ರಗಳು ಬರುತ್ತಿವುದು ಬೆಳಕಿಗೆ ಬಂದಿದೆ. 

ಬೆದರಿಕೆ ಪತ್ರಗಳ ಬಗ್ಗೆ ಈಗಾಗಲೇ ನಗರ ಪೊಲೀಸ್‌ ಆಯುಕ್ತರ ಗಮನಕ್ಕೆ ತಂದಿದ್ದು, ಅಧ್ಯಕ್ಷರ ಸುರಕ್ಷತೆಗಾಗಿ ಈಚೆಗೆ ಗನ್‌ಮ್ಯಾನ್‌ರನ್ನು ಕೂಡ ನಿಯೋಜಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಪ್ರಾಧಿಕಾರದ ಅಧ್ಯಕ್ಷರ ಆಪ್ತರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. ಕನ್ನಡಪರ ಕೆಲಸಗಳಲ್ಲಿ ತೊಡಗಿರುವ ಅಧ್ಯಕ್ಷರಿಗೆ ಬೆದರಿಕೆಯೊಡ್ಡುವ ಮೂಕರ್ಜಿಗಳು ಬರುತ್ತಿರುವುದು ಕನ್ನಡಪರ ಹೋರಾಟಗಾರರಲ್ಲಿ ಬೇಸರ ಮೂಡಿಸಿದೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ನೀವೇ ಹಿಂದಿ ಕಲಿಯಿರಿ!
“ಹಿಂದಿ ತೆರವುಗೊಳಿಸಲು ಸೂಚನೆ ನೀಡುವ ಮೂಲಕ ರಾಷ್ಟ್ರೀಯ ಭಾಷೆಗೆ ಅವಮಾನ ಮಾಡುತ್ತಿದ್ದೀರ. ಬೇಕಿದ್ದರೆ ನೀವೇ ಹಿಂದಿ ಕಲಿಯಿರಿ. ಈ ದೇಶದಲ್ಲಿ ಇರಬೇಕು ಎಂದಾದರೆ, ಹಿಂದಿ ಕಲಿಯಲೇಬೇಕು,’ ಎಂದು ಸಾಮಾನ್ಯ ಅಂಚೆ ಕಾರ್ಡ್‌ಗಳಲ್ಲಿ ಬರೆದು ಪೋಸ್ಟ್‌ ಮಾಡಿರುವ ಕೆಲವು ಕಿಡಿಗೇಡಿಗಳು ಧ್ಯಕ್ಷರಿಗೆ ಬೆದರಿಕೆ ಹಾಕಿದ್ದಾರೆ. ಇದನ್ನು ಸ್ವತಃ ಅಧ್ಯಕ್ಷರು ತಮ್ಮ ಆಪ್ತರಲ್ಲಿ ಹೇಳಿಕೊಂಡಿದದಾರೆ ಎಂದು ತಿಳಿದುಬಂದಿದೆ.

ಬೆದರಿಕೆ ಪತ್ರಗಳು ಬಂದಿರುವುದು ನಿಜ. ಆದರೆ, ಅಧ್ಯಕ್ಷರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅದೇನೇ ಇರಲಿ, ಈ ಬಗ್ಗೆ ಪೊಲೀಸ್‌ ಆಯುಕ್ತರ ಗಮನಕ್ಕೆ ತರಲಾಗಿದೆ. ಗನ್‌ಮ್ಯಾನ್‌ ನಿಯೋಜನೆಗೂ ಮನವಿ ಮಾಡಲಾಗಿತ್ತು. ತಿಂಗಳ ಹಿಂದೆ ಗನ್‌ಮ್ಯಾನ್‌ ನೀಡಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷರ ಆಪ್ತರು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲ, ಪ್ರಾಧಿಕಾರದ ಅಧ್ಯಕ್ಷರಿಗೆ ಬೆದರಿಕೆ ಪತ್ರ ಬಂದಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ದಿನೇಶ್‌ಕುಮಾರ್‌ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. 

Advertisement

ಬೆದರಿಕೆ ಪತ್ರ ಬಂದಿಲ್ಲ
ಪ್ರಾಧಿಕಾರದ ಅಧ್ಯಕ್ಷರಿಗೆ ಬೆದರಿಕೆ ಪತ್ರ ಬಂದಿರುವುದನ್ನು ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರಳೀಧರ್‌ ರಾವ್‌ ತಳ್ಳಿಹಾಕಿದ್ದಾರೆ. “ನನಗೆ ತಿಳಿದಮಟ್ಟಿಗೆ ಅಧ್ಯಕ್ಷರಿಗೆ ಬೆದರಿಕೆ ಪತ್ರಗಳಾಗಲಿ ಅಥವಾ ಕರೆಗಳಾಗಲಿ ಬಂದಿಲ್ಲ. ಹಾಗೊಂದು ವೇಳೆ ಬಂದರೂ, ಅಂತಹ ಬೆದರಿಕೆಗಳಿಗೆ ಹೆದರುವವರಾರೂ ಇಲ್ಲಾರೂ ಇಲ್ಲ.

ಪ್ರಾಧಿಕಾರ ತನ್ನ ಪಾಡಿಗೆ ಕನ್ನಡದ ಕೆಲಸ ಮಾಡಿಕೊಂಡು ಹೋಗುತ್ತದೆ. ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ’ ಎಂದು ಹೇಳಿದರು.  “ಪ್ರಾಧಿಕಾರದ ಅಧ್ಯಕ್ಷರು ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವುದರಿಂದ ಸರ್ಕಾರ ಅವರಿಗೆ ಗನ್‌ಮ್ಯಾನ್‌ ನಿಯೋಜಿಸಿದೆ. ಪ್ರಾಧಿಕಾರದ ಈ ಹಿಂದಿನ ಅಧ್ಯಕ್ಷರಿಗೂ ಗನ್‌ಮ್ಯಾನ್‌ ಇದ್ದರು,’ ಎಂದು ಮುರಳೀಧರ್‌ ರಾವ್‌ ಸ್ಪಷ್ಟಪಡಿಸಿದರು. 

ಕನ್ನಡ ಅನುಷ್ಠಾನಕ್ಕಾಗಿ ಬ್ಯಾಂಕ್‌ಗಳಿಗೂ ಅಧ್ಯಕ್ಷರ ಪತ್ರ
ರಾಷ್ಟ್ರೀಯ ಮಟ್ಟದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯಾ ರಾಜ್ಯಗಳ ಅಧಿಕೃತ ಭಾಷೆಯಲ್ಲಿ ನಡೆಸಲು ಸೂಚಿಸುವಂತೆ ಕೇಂದ್ರ ಹಣಕಾಸು ಸಚಿವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಪತ್ರ ಬರೆದ ಬೆನ್ನಲ್ಲೇ ಬ್ಯಾಂಕಿನ ಆಡಳಿತ ವ್ಯವಹಾರದಲ್ಲಿ ಕನ್ನಡ ಅನುಷ್ಠಾನಗೊಳಿಸುವಂತೆ ರಾಜ್ಯದಲ್ಲಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಬ್ಯಾಂಕ್‌ ಆಡಳಿತ ವ್ಯವಹಾರದಲ್ಲಿ ತ್ರಿಭಾಷಾ ಸೂತ್ರ ಅನ್ವಯಿಸುತ್ತದೆ. ಆದರೆ, ಬ್ಯಾಂಕ್‌ಗಳು ಇದನ್ನು ಪಾಲಿಸುತ್ತಿಲ್ಲ. ಸ್ಥಳೀಯ ಭಾಷೆಗೆ ಗೌರವ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ ಎಂದೂ ಅಧ್ಯಕ್ಷರು ಪತ್ರದಲ್ಲಿ ತಿಳಿಸಿದ್ದಾರೆ.

“ಬ್ಯಾಂಕಿನ ಎಲ್ಲ ಸೇವೆಗಳ ಮಾಹಿತಿ ಜನರಿಗೆ ಕನ್ನಡದಲ್ಲೇ ಸಿಗುವಂತಾಗಬೇಕು. ದೈನಂದಿನ ವ್ಯವಹಾರಗಳು ಕನ್ನಡದಲ್ಲೇ ಇರಬೇಕು. ನೇಮಕಾತಿ ಸಂದರ್ಭದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನದ ಜತೆಗೆ “ಸಿ’ ಮತ್ತು “ಡಿ’ ವರ್ಗದ ಹುದ್ದೆಗಳನ್ನು ಸಂಪೂರ್ಣವಾಗಿ ಕನ್ನಡಿಗರಿಗೇ ನೀಡಬೇಕು,’ ಎಂದು ಹೇಳಿದ್ದಾರೆ.

ಅಲ್ಲದೆ, ಇನ್‌ಸ್ಟಿಟ್ಯೂಟ್‌ ಆಫ್ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (ಐಬಿಪಿಎಸ್‌) ವತಿಯಿಂದ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ಆಯಾ ರಾಜ್ಯಗಳ ಸ್ಥಳೀಯ ಭಾಷೆ ಬಲ್ಲ ಅಭ್ಯರ್ಥಿಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು. ರಾಜ್ಯದಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಅನ್ಯಭಾಷಿಕ ಅಧಿಕಾರಿಗಳು ಆರು ತಿಂಗಳಲ್ಲಿ ಕನ್ನಡ ಕಲಿಯಬೇಕು.

ಕಲಿಯದವರನ್ನು ನೇಮಕಾತಿ ನಿಯಮಾನುಸಾರ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದೂ ಪತ್ರದಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಖ್ಯಸ್ಥರ ಜತೆಗೆ ಷೆಡ್ಯುಲ್‌ ಬ್ಯಾಂಕ್‌ಗಳು/ ಗ್ರಾಮೀಣ ಬ್ಯಾಂಕ್‌ಗಳ ಪ್ರಾಂತೀಯ ಮುಖ್ಯಸ್ಥರಿಗೂ ಪತ್ರ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next