Advertisement
ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಕಂಪೆನಿಗಳೊಂದಿಗೆ ಚಾಲಕರು ಈ ಮೊದಲು ಯಾವುದೇ ಅಡತಡೆಗಳಿಲ್ಲದೆ ಸುಲಭವಾಗಿ ತಮ್ಮ ವಾಹನಗಳನ್ನು ಜೋಡಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಜೋಡಣೆ ಮಾಡಿಕೊಳ್ಳುವ ಮುನ್ನ ಚಾಲಕರಿಗೆ “ಹಿಂದಿ ಮೌಖೀಕ ಪರೀಕ್ಷೆ’ ನಡೆಸಲಾಗುತ್ತಿದೆ. ಈ ಮೂಲಕ ನಿಧಾನವಾಗಿ ಹಿಂದಿಯನ್ನು ಹೇರಲಾಗುತ್ತಿದೆ ಎಂದು ಕೆಲ ಟ್ಯಾಕ್ಸಿ ಚಾಲಕರು ಆರೋಪಿಸಿದ್ದಾರೆ.
Related Articles
Advertisement
ಒತ್ತಾಯ ಎಷ್ಟು ಸರಿ?: “ನನ್ನದು ಸ್ವಿಫ್ಟ್ ಡಿಝೈರ್ ಕಾರು ಇದೆ. ಆರು ತಿಂಗಳ ಹಿಂದೆ ಓಲಾ ಮತ್ತು ಉಬರ್‌ಗೆ ಅಟ್ಯಾಚ್ ಮಾಡಲು ಹೋದಾಗ, ಬೆಂಗಳೂರಿಗೆ ಹೊರಗಿನ ಜನ ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಅವರೊಂದಿಗೆ ವ್ಯವಹರಿಸಲು ಹಿಂದಿ ಸ್ವಲ್ಪವಾದರೂ ಬರಲೇಬೇಕು,’ ಎಂದು ಹೇಳಿದರು. ಆಗ, ಹೇಗೋ ಹಿಂದಿ ಮ್ಯಾನೇಜ್ ಮಾಡಿದೆ. ಆದರೆ, ಹೀಗೆ ಬಲವಂತವಾಗಿ ಹಿಂದಿ ಹೇರುತ್ತಿರುವುದು ಎಷ್ಟು ಸರಿ ಸರ್?’ ಎಂದು ಕುಮಾರಸ್ವಾಮಿ ಲೇಔಟ್ ನಿವಾಸಿ ರವಿಕುಮಾರ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
“ನನಗೆ ಮಾತ್ರವಲ್ಲ, ಕೆ.ಆರ್. ಪುರದಲ್ಲಿರುವ ನನ್ನ ಸ್ನೇಹಿತ ವೆಂಕಟಾಚಲಪತಿಗೂ ಇದೇ ಅನುಭವ ಆಗಿದೆ. ಹಿಂದಿ ಬಾರದಿದ್ದರೆ ಕೆಲಸ ಕೊಡುವುದಿಲ್ಲ ಎಂದಲ್ಲ; ಕೊಡಬಹುದು. ಆದರೆ, ಈ ಧೋರಣೆಗಳು ಹಿಂದಿ ಕಲಿಕೆಯ ಅನಿವಾರ್ಯತೆಯನ್ನು ಸೃಷ್ಟಿಸುವಂತಿದೆ,’ ಎಂದೂ ಅವರು ಹೇಳುತ್ತಾರೆ.
ಉತ್ತರ ಪ್ರದೇಶದ ಡ್ರೈವರ್‌ಗಳ ನಿಯೋಜನೆ: ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಇತ್ತೀಚೆಗೆ ತಮ್ಮಲ್ಲಿರುವ ಟ್ಯಾಕ್ಸಿಗಳಿಗೆ ಚಾಲಕರನ್ನು ನೇಮಿಸುವಾಗಲೂ ಹಿಂದಿ ಬಲ್ಲವರಿಗೆ ಅದರಲ್ಲೂ ಉತ್ತರ ಭಾರತದವರಿಗೇ ಆದ್ಯತೆ ನೀಡಿವೆ ಎಂಬ ಆರೋಪವೂ ಕೇಳಿಬಂದಿದೆ. ನಗರದಾದ್ಯಂತ ಸಾವಿರಾರು ಟ್ಯಾಕ್ಸಿಗಳು ಆ್ಯಪ್ ಆಧಾರಿತ ಕಂಪೆನಿಗಳ ಬಳಿ ಇವೆ. ಅವುಗಳಿಗೆ ತಿಂಗಳಿಗೆ 15ರಿಂದ 20 ಸಾವಿರ ರೂ. ಮಾಸಿಕ ವೇತನ ಅಥವಾ ಇಂತಿಷ್ಟು ಗಂಟೆಗಳು ಡ್ಯುಟಿ ನಿಗದಿಪಡಿಸಿ ಚಾಲಕರನ್ನು ನಿಯೋಜಿಸಲಾಗಿದೆ. ಅವರಲ್ಲಿ ಬಹುತೇಕರು ಅನ್ಯರಾಜ್ಯದವರು ಎಂದು ಚಾಲಕರು ಆರೋಪಿಸುತ್ತಾರೆ.
ನಿಯಮ ವಿಧಿಸಿಲ್ಲ; ಉಬರ್: ಈ ಬಗ್ಗೆ ಟ್ಯಾಕ್ಸಿ ಕಂಪೆನಿ ಉಬರ್ ಅನ್ನು ಸಂಪರ್ಕಿಸಿದರೆ ಅಲ್ಲಿನ ಅಧಿಕಾರಿಗಳು ಹೇಳುವುದೇ ಬೇರೆ. ಹಿಂದಿ ಬರಲೇಬೇಕು ಎಂದು ಯಾವ ಚಾಲಕರಿಗೂ ನಾವ ನಿಯಮ ವಿಧಿಸಿಲ್ಲ. ಅಟ್ಯಾಚ್ ಮಾಡಿಕೊಳ್ಳುವಾಗ ಅದನ್ನು ಕೇಳಿದ ಉದಾಹರಣೆಯೂ ಇಲ್ಲ ಎಂದು ಹೇಳಿದ್ದಾರೆ.
ಆ್ಯಪ್ ಆಧಾರಿತ ಟ್ಯಾಕ್ಸಿ ಕಂಪೆನಿಗಳು ಹಿಂದಿ ಬರುವುದಿಲ್ಲ ಎಂಬ ಕಾರಣಕ್ಕಾಗಿಯೇ ಅಟ್ಯಾಚ್ ಮಾಡಿಕೊಳ್ಳುವುದನ್ನು ನಿರಾಕರಿಸಿದ್ದು ಕಂಡುಬಂದರೆ ಹಾಗೂ ಅಂತಹ ವಂಚನೆಗೆ ಒಳಗಾದವರು ಪ್ರಾಧಿಕಾರಕ್ಕೆ ನೇರವಾಗಿ ದೂರು ನೀಡಿದರೆ, ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ. ಆದರೆ, ವ್ಯವಹಾರದ ದೃಷ್ಟಿಯಿಂದ ಸ್ವಲ್ಪ ಹಿಂದಿ ಕಲಿಯಬೇಕಾಗುತ್ತದೆ ಎಂದಾಗ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಬರುವುದಿಲ್ಲ. ಯಾಕೆಂದರೆ, ಅದು ವ್ಯವಹಾರದ ದೃಷ್ಟಿಯಿಂದ ಆತನದ್ದು ಸರಿ ಇರಬಹುದು. ಕನ್ನಡ ಬಿಡಿ ಎಂದು ಅವನು ಎಲ್ಲಿಯೂ ಹೇಳುತ್ತಿಲ್ಲವಲ್ಲ.– ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ. * ವಿಜಯಕುಮಾರ್ ಚಂದರಗಿ