ಧಾರವಾಡ: ಸಂಗೀತ, ಸಾಹಿತ್ಯ, ಸಿನಿಮಾ, ಕಲೆ ಮತ್ತು ಸಾಹಸ ಕ್ರೀಡೆಗಳಿಗೆ ಯಾವುದೇ ದೇಶ, ಭಾಷೆ, ಗಡಿಯ ಹಂಗಿಲ್ಲ. ಸಿಕ್ಕಿಂ ಗಡಿಯಲ್ಲಿ ಭಾರತ ಮತ್ತು ಚೀನಾ ಕಳೆದ ಎರಡು ತಿಂಗಳಿಂದ ಯುದ್ಧಕ್ಕೆ ಸಿದ್ಧವಾಗುತ್ತಿವೆ. ಆದರೆ ಇದೇ ಅವಧಿಯಲ್ಲಿ ಧಾರವಾಡ ಜಿಲ್ಲೆಯ 8 ಜನ ಕಾಲೇಜು ವಿದ್ಯಾರ್ಥಿಗಳು ಚೀನಾದಲ್ಲಿ ಮಲ್ಲಕಂಬ ಪ್ರದರ್ಶನ ನೀಡುತ್ತಿದ್ದು, ಈ ಪ್ರದರ್ಶನ ನೋಡಿದ ಚೀನೀಯರು ಹಿಂದಿ-ಚೀನಿ ಭಾಯಿ ಭಾಯಿ ಎನ್ನುತ್ತಿದ್ದಾರೆ.
ಹೌದು. ಧಾರವಾಡ ಜಿಲ್ಲೆಯ ಕಮಡೊಳ್ಳಿಯ ಜಯ ಕರ್ನಾಟಕ ಮಲ್ಲಕಂಭ ಅಕಾಡೆಮಿಯ ಎಂಟು ಜನ ವಿದ್ಯಾರ್ಥಿಗಳು ಚೀನಾದ ದಕ್ಷಿಣ ಪ್ರಾಂತ್ಯದ ಫೆಸಿಪಿಕ್ ಮಹಾಸಾಗರಕ್ಕೆ ಅಂಟಿಕೊಂಡಿರುವ ಕ್ಷೆಯ್‌ನೇನ್ ದ್ವೀಪದಲ್ಲಿ ಮಲ್ಲಕಂಬ ಪ್ರದರ್ಶನ ಮಾಡುತ್ತಿದ್ದಾರೆ. ಚೀನಾ ಮಾತ್ರವಲ್ಲ ವಿಶ್ವದ ನಾನಾ ಭಾಗಗಳಿಂದ ಬರುವ ಸಾವಿರಾರು ಪ್ರವಾಸಿಗರ ಎದುರು ಪ್ರತಿದಿನ ಮಲ್ಲಕಂಬ ಪ್ರದರ್ಶನ ಮಾಡುತ್ತ ನಾಡಿನ ಸಾಹಸ ಕ್ರೀಡೆಯೊಂದನ್ನು ಜಗತ್ತಿಗೆ ಪರಿಚಯಿಸುತ್ತಿದ್ದಾರೆ.
ಚೀನಾದ ಈ ಭಾಗದಲ್ಲಿ ಜೂನ್ ತಿಂಗಳಿಂದ ಸೆಪ್ಟೆಂಬರ್‌ವರೆಗೂ ವಿಶ್ವದ ಎಲ್ಲಾ ಭಾಗಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಈ ಅವಧಿಯಲ್ಲೇ ಫೇಂಟಾ ವಾಟರ್‌ವರ್ಲ್ಡ್ ಎಂಬ ದೈತ್ಯ ಪ್ರವಾಸೋದ್ಯಮ ಸಂಸ್ಥೆ ಪ್ರವಾಸಿಗರ ಎದುರು ವಿಶ್ವದ ಮಹಾನ್ ಕಲೆ, ಸಾಹಸ ಕ್ರೀಡೆಗಳು ಮತ್ತು ಮನೋರಂಜನಾ ತಂಡಗಳನ್ನು ಕರೆಯಿಸಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತದೆ. ಅಲ್ಲಿ ಭಾರತದಿಂದ ಈ ವರ್ಷ ಮಲ್ಲಕಂಬಕ್ಕೆ ಆಹ್ವಾನ ಸಿಕ್ಕಿದೆ.
ಮಲ್ಲಕಂಬಕ್ಕೆ ಫಿದಾ: ಚೀನಾದ ಅತ್ಯಂತ ದೊಡ್ಡ ಫೆಂಟಾಸಿ ಪಾರ್ಕ್‌ಗಳಲ್ಲಿ ಒಂದಾಗಿರುವ ಕ್ಷೆ$çಯ್‌ನೇನ್ ದ್ವೀಪದ ಫೇಂಟಾ ವಾಟರ್ ವರ್ಲ್ಡ್ನಲ್ಲಿ ವಿಶ್ವದ ಏಳು ರಾಷ್ಟ್ರಗಳಾದ ಉತ್ತರ ಅಮೆರಿಕ, ಕಾಂಬೋಡಿಯಾ, ಉಕ್ರೇನ್, ವೆಸ್ಟ್ ಇಂಡೀಸ್, ಕೋಲಂಬಿಯಾ, ಉಗಾಂಡಾ ಮತ್ತು ಭಾರತದ ವಿವಿಧ ಸಾಹಸ ಕಲಾ ತಂಡಗಳು ತಮ್ಮ ಪ್ರದರ್ಶನ ನೀಡುತ್ತಿವೆ.
ಭಾರತದಿಂದ ಕರ್ನಾಟಕದ ಅದರಲ್ಲೂ ಧಾರವಾಡ ಜಿಲ್ಲೆಯ ಗಂಡು ಕಲೆ ಎಂದೇ ಕರೆಯಿಸಿಕೊಳ್ಳುವ ಮಲ್ಲಕಂಬ ಪ್ರದರ್ಶನಕ್ಕೆ ಈ ವರ್ಷ ಅವಕಾಶ ನೀಡಲಾಗಿದೆ. ಜೂನ್ 27 ರಿಂದ ಸೆಪ್ಟೆಂಬರ್ 5 ರವರೆಗೂ ಧಾರವಾಡದ ಎಂಟು ಜನ ವಿದ್ಯಾರ್ಥಿಗಳಾದ ಮೈಲಾರಿ ಕಾಲವಾಡ, ರಫಿàಕ್ ಅಹ್ಮದ್, ಮಾರುತಿ ಮರಿಯಪ್ಪನವರ, ದಶರಥ ಚೌಹಾಣ್, ಹಸನಸಾಬ ಕುಂದಗೋಳ, ಕರಿಯಪ್ಪ ಕಳ್ಳಿಮನಿ, ಭೀಮಸಿ ಹಡಪದ ಮತ್ತು ಹನುಮಂತಪ್ಪ ಇಲ್ಲಿ ಮಲ್ಲಕಂಬ ಪ್ರದರ್ಶನ ನೀಡುತ್ತಿದ್ದಾರೆ.
ಮಲ್ಲಕಂಬಕ್ಕೆ ವಿದೇಶಿಗರ ಪೈಕಿ ಚೀನಿಯರೇ ಹೆಚ್ಚು ಒಲವು ತೋರುತ್ತಿದ್ದು, ಈ ತಂಡವನ್ನು ಕಾಯಂ ಆಗಿ ಅಲ್ಲಿಯೇ ಇರಿಸಿಕೊಳ್ಳುವುದಕ್ಕೂ ಸಂಸ್ಥೆ ಒಲವು ತೋರಿದೆ ಎಂದು ಮಲ್ಲಕಂಬ ತಂಡದ ಸದಸ್ಯ ರಫೀಕ್ “ಉದಯವಾಣಿ’ಗೆ ತಿಳಿಸಿದ್ದಾರೆ.
* ಬಸವರಾಜ ಹೊಂಗಲ್