ಬೆಳಗಾವಿ: ಗಲ್ಲು ಶಿಕ್ಷೆಗೆ ಗುರಿಯಾದ ರಾಜ್ಯದ 40 ಕೈದಿಗಳು ಈಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಆದೇಶ ಬಂದರೆ 36 ವರ್ಷಗಳ ಬಳಿಕ ಶಿಕ್ಷಿತರನ್ನು ನೇಣುಗಂಬಕ್ಕೆ ಏರಿಸಲು ಈ ಜೈಲು ಸರ್ವ ಸಿದ್ಧವಾಗಿದೆ. 1923ರಲ್ಲಿ ನಿರ್ಮಾಣಗೊಂಡಿರುವ ಹಿಂಡಲಗಾ ಜೈಲಿನಲ್ಲಿ ಈವರೆಗೆ 39 ಮಂದಿಯನ್ನು ಗಲ್ಲಿಗೇರಿಸಲಾಗಿದೆ. 36 ವರ್ಷಗಳ ಹಿಂದೆ ಅಂದರೆ 1983, ನ.9ರಂದು ಗೋಕಾಕ ತಾಲೂಕಿನ ಹಣಮಂತಪ್ಪ ಮರೆಯಪ್ಪ ಮಾರೀಹಾಳ ಎಂಬ ವ್ಯಕ್ತಿಯನ್ನು ನೇಣಿಗೇರಿಸಿದ್ದೇ ಕೊನೆಯ ಗಲ್ಲು ಶಿಕ್ಷೆ.
ರಾಜ್ಯದಲ್ಲಿ ಮರಣ ದಂಡನೆಗೆ ಒಳಗಾದ ಕೈದಿಗಳೆಲ್ಲರನ್ನೂ ಹಿಂಡಲಗಾಕ್ಕೆ ತಂದು ಕೂಡಿ ಹಾಕಲಾಗುತ್ತದೆ. ಈವರೆಗೆ 28 ಜನರಿದ್ದ ಈ ಸ್ಥಳದಲ್ಲಿ ಸೋಮವಾರ ಹಾವೇರಿ ಹಾಗೂ ಬಳ್ಳಾರಿಯಿಂದ ಇಬ್ಬರು ಬಂದು ಸೇರಿದ್ದಾರೆ. ವಿಕೃತ ಕಾಮಿ ಉಮೇಶ ರೆಡ್ಡಿ ಸೇರಿ ಇನ್ನೂ 40 ಜನ ಹಿಂಡಲಗಾದಲ್ಲಿದ್ದು, ಕೆಲವರ ಅರ್ಜಿಗಳು ರಾಷ್ಟ್ರಪತಿ ಭವನದಲ್ಲಿ ಕ್ಷಮಾದಾನಕ್ಕೆ ಕಾಯುತ್ತಿವೆ. ರೆಡ್ಡಿ ಸೇರಿದಂತೆ ಇನ್ನೂ ಕೆಲವರು ಮರು ಪರಿಶೀಲನಾ ಅರ್ಜಿ ಹಾಕಿದ್ದಾರೆ.
ತುಕ್ಕು ಹಿಡಿದ ನೇಣುಗಂಬಕ್ಕೆ ಪಾಲಿಶ್: ಒಂದೇ ಸಲ ಮೂವರನ್ನು ಗಲ್ಲಿಗೇರಿಸುವ ವ್ಯವಸ್ಥೆ ಹಿಂಡಲಗಾ ಜೈಲಿನಲ್ಲಿದೆ. ನೇಣುಗಂಬ ಸಂಪೂರ್ಣವಾಗಿ ಕಬ್ಬಿಣದ ಶೀಟ್‌ನದ್ದಾಗಿದೆ. ಪ್ಲೇಟ್ ಜಗ್ಗುವ ಕೈ ಸ್ಟ್ಯಾಂಡ್ ಕೂಡ ಕಬ್ಬಿಣದ್ದು, ಇದೆಲ್ಲವೂ ತುಕ್ಕು ಹಿಡಿದಿದ್ದವು. ಕೆಲ ದಿನಗಳಿಂದ ಅದಕ್ಕೆ ಎಣ್ಣೆ ಹಚ್ಚಿ ಪಾಲಿಶ್ ಮಾಡಿ ತುಕ್ಕು ತೆಗೆಯಲಾಗಿದೆ. 3 ವರ್ಷದಿಂದ ನೇಣುಗಂಬವನ್ನು ಸುಸ್ಥಿತಿಯಲ್ಲಿಡಲಾಗಿದೆ. ನೇಣುಗಂಬಕ್ಕೆ ಕಾಲ ಕಾಲಕ್ಕೆ ಎಣ್ಣೆ, ಗ್ರೀಸ್ ಹಚ್ಚಲಾಗುತ್ತಿದೆ. ನೀರಿನಿಂದ ತೊಳೆದು ಸ್ವತ್ಛಗೊಳಿಸಲಾಗಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಮರಳಿನ ಚೀಲದ ತರಬೇತಿ: 36 ವರ್ಷದ ಹಿಂದೆ ಗಲ್ಲು ಹಾಕುವುದಕ್ಕೇ ಒಬ್ಬ ಸಿಬ್ಬಂದಿ ಯನ್ನು ನೇಮಿಸಲಾಗಿತ್ತು. ಈಗ ಕಾರ್ಯ ನಿರ್ವಾಹಕ ಜೈಲರ್ ಅಥವಾ ಹಿರಿಯ ಸಿಬ್ಬಂದಿ ತರಬೇತಿ ಪಡೆದು ಗಲ್ಲಿಗೇರಿಸುತ್ತಾರೆ. ಈಗಾ ಗಲೇ ಕೆಲವರಿಗೆ ತರಬೇತಿಯನ್ನೂ ನೀಡ ಲಾಗಿದೆ. ಯಾವುದೇ ಸಂದರ್ಭದಲ್ಲಿ ಬ್ಯಾಕ್ ಆರ್ಡರ್ ಬಂದರೂ ಸಜ್ಜಾಗಿದ್ದಾರೆ ಇಲ್ಲಿನ ಸಿಬ್ಬಂದಿ. ನೇಣಿಗೇರುವ ವ್ಯಕ್ತಿಯ ತೂಕದ ಪ್ರಮಾಣದಷ್ಟು ಮರಳು ಚೀಲ ಹಾಕಿ ತಯಾರಿ ಮಾಡಲಾಗುತ್ತದೆ. ಅದಕ್ಕೆ ಬೇಕಾಗುವ ಹಗ್ಗವನ್ನು ಜೈಲಿನಲ್ಲಿಯೇ ತಯಾರಿಸಲಾಗುತ್ತದೆ.
* ಭೈರೋಬಾ ಕಾಂಬಳೆ