Advertisement

ಹಿಮಾಚಲ, ಉತ್ತರಾಖಂಡದಲ್ಲಿ ದುರಂತ: ಮೇಘಸ್ಫೋಟ, ಪ್ರವಾಹ: 31 ಸಾವು ; ಇನ್ನೂ 18 ಮಂದಿ ನಾಪತ್ತೆ

12:12 AM Aug 21, 2022 | Team Udayavani |

ಹೊಸದಿಲ್ಲಿ: ಹಿಮಾಚಲಪ್ರದೇಶ, ಉತ್ತರಾಖಂಡ ದಲ್ಲಿ ಶುಕ್ರವಾರ ರಾತೋ­ರಾತ್ರಿ ಉಂಟಾದ ಮೇಘ ಸ್ಫೋಟ, ದಿಢೀರ್‌ ಪ್ರವಾಹ ಹಾಗೂ ಭೂಕುಸಿತವು ಹಲವು ಪ್ರಾಣಗಳನ್ನು ಬಲಿತೆಗೆದುಕೊಂಡಿದೆ.

Advertisement

ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 22 ಮಂದಿ ಸಾವಿಗೀಡಾಗಿದ್ದು, 8 ಮಂದಿ ಅವಶೇಷಗಳಡಿ ಹೂತು­ಹೋಗಿದ್ದಾರೆ. ಉತ್ತರಾಖಂಡ ಮತ್ತು ಒಡಿಶಾದಲ್ಲಿ ಮಳೆ ಸಂಬಂಧಿ ದುರ್ಘ‌ಟನೆಗಳಿಂದ ತಲಾ ನಾಲ್ವರು ಅಸುನೀಗಿದ್ದರೆ, ಜಾರ್ಖಂಡ್‌ನ‌ಲ್ಲಿ ಒಬ್ಬರು ಕೊನೆಯುಸಿರೆಳೆದಿದ್ದಾರೆ. ಎಲ್ಲರೂ ನಸುಕಿನ ನಿದ್ರೆಯಲ್ಲಿದ್ದಾಗಲೇ ಅವಘಡಗಳು ಸಂಭವಿಸಿದ ಕಾರಣ ಹೆಚ್ಚಿನ ಪ್ರಾಣಹಾನಿ ಆಗಿದೆ.

ಭಾರೀ ಮಳೆ, ಭೂಕುಸಿತದಿಂದಾಗಿ ಮಂಡಿ, ಕಾಂಗ್ರಾ ಹಾಗೂ ಚಂಬಾ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ಹಾನಿ ಉಂಟಾಗಿದೆ. ಬಂಡೆಕಲ್ಲುಗಳು ಉರುಳಿಬಿದ್ದ ಪರಿಣಾಮ ಹಲವಾರು ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಹಮೀರ್‌ಪುರ ಜಿಲ್ಲೆ ಯಲ್ಲಿ ದಿಢೀರ್‌ ಪ್ರವಾಹ­ದಿಂದಾಗಿ ಸಿಲುಕಿ ಕೊಂಡಿದ್ದ 22 ಮಂದಿಯನ್ನು ರಕ್ಷಿಸಲಾಗಿದೆ. ಕುಶಾನ್‌ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದ ಪರಿಣಾಮ, ಒಂದೇ ಕುಟುಂಬದ 8 ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಶೋಧ ಕಾರ್ಯ ನಡೆದರೂ ಶನಿವಾರ ರಾತ್ರಿವರೆಗೂ ಮೃತ ದೇಹಗಳು ಪತ್ತೆಯಾ­ಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ.25ರವರೆಗೂ ಧಾರಾಕಾರ ಮಳೆ ಮುಂದುವರಿ­ಯಲಿದೆ ಎಂದು ಹಿಮಾಚಲದ ವಿಪತ್ತು ನಿರ್ವಹಣಾ ಪಡೆ ಹೇಳಿದೆ.

ಮೇಘಸ್ಫೋಟದಿಂದ 4 ಸಾವು: ಇದೇ ವೇಳೆ, ಉತ್ತರಾಖಂಡದ ಹಲವೆಡೆ ಶನಿವಾರ ಮುಂಜಾನೆ ಸಂಭವಿಸಿದ ಮೇಘಸ್ಫೋಟದಿಂದ ನಾಲ್ವರು ಅಸು ನೀಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. ಅನೇಕ ನದಿಗಳು ಉಕ್ಕಿ ಹರಿಯ­ಲಾರಂಭಿಸಿದ್ದು, ಸೇತುವೆಗಳು ಕೊಚ್ಚಿಹೋಗಿವೆ. ಟೋನ್ಸ್‌ ನದಿಯ ತಟದಲ್ಲಿರುವ ಪ್ರಸಿದ್ಧ ಶಿವ ದೇಗುಲದ ತಾಪಕೇಶ್ವರ ಗುಹೆಗಳ ಒಳಗೂ ನೀರು ನುಗ್ಗಿದೆ.

2 ಲಕ್ಷ ಮನೆಗಳಿಗೆ ಹಾನಿ: ಅಸ್ಸಾಂನಲ್ಲಿ ಪ್ರಸಕ್ತ ವರ್ಷ ಉಂಟಾದ ಪ್ರವಾಹದಿಂದ 2.04 ಲಕ್ಷ ಮನೆಗಳು ಹಾನಿಗೀಡಾಗಿವೆ ಎಂದು ಸಿಎಂ ಹಿಮಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಮೇ, ಜೂನ್‌, ಜುಲೈನಲ್ಲಿ ಪ್ರವಾಹ, ಭೂಕುಸಿತದಿಂದ ಒಟ್ಟಾರೆ 199 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2.41 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗಿವೆ ಎಂದೂ ಅವರು ತಿಳಿಸಿದ್ದಾರೆ.

Advertisement

ಒಡಿಶಾದಲ್ಲಿ ಮತ್ತೆ ಪ್ರವಾಹ: ಒಡಿಶಾದಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು, ಪ್ರವಾಹ ಹೆಚ್ಚಾ ಗಿದೆ. ಶನಿವಾರ ನಾಲ್ವರು ಮೃತಪಟ್ಟಿದ್ದಾರೆ. ಕೆಲವು ಪ್ರದೇಶಗಳು ಈಗಾಗಲೇ ಜಲಾವೃತವಾಗಿವೆ. 500 ಗ್ರಾಮಗಳು ಜಲಾವೃತಗೊಂಡು, 4 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ. ಬಹುತೇಕ ಎಲ್ಲ ನದಿಗಳೂ ಅಪಾಯದ ಮಟ್ಟ ಮೀರಿ ಹರಿಯು ತ್ತಿವೆ. ನೆರೆರಾಜ್ಯವಾದ ಜಾರ್ಖಂಡ್‌ನ‌ಲ್ಲೂ ಬಿರು­ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ನೂರಾರು ಮರಗಳು, ವಿದ್ಯುತ್‌ ಕಂಬಗಳು ಧರೆ­ಗುರು­ಳಿವೆ. ಹಲವು ಜಿಲ್ಲೆಗಳಲ್ಲಿ ತಗ್ಗುಪ್ರದೇಶಗಳಿಗೆ ನೀರು ನುಗ್ಗಿವೆ.

ಕೊಚ್ಚಿಹೋದ
ಚಕ್ಕಿ ರೈಲ್ವೇ ಬ್ರಿಡ್ಜ್
ಹಿಮಾಚಲಪ್ರದೇಶದ ಕಾಂಗ್ರಾ ಜಿಲ್ಲೆಯ ಪ್ರಮುಖ ಸೇತುವೆಗಳಲ್ಲಿ ಒಂದಾದ ಚಕ್ಕಿ ರೈಲ್ವೆ ಬ್ರಿಡ್ಜ್ ಶುಕ್ರವಾರ ರಾತ್ರಿಯ ಮಳೆಗೆ ಕೊಚ್ಚಿ ಹೋಗಿದೆ. ಈ ಹಿನ್ನೆಲೆಯಲ್ಲಿ ಸೇತುವೆಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿದ್ದು, ಪಠಾಣ್‌ಕೋಟ್‌ ಹಾಗೂ ಜೋಗಿಂದರ್‌ನಗರದ ನಡುವಿನ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ವೈಷ್ಣೋದೇವಿ ದೇಗುಲ ಯಾತ್ರೆ ಪುನಾರಂಭ
ನಿರಂತರ ಮಳೆಯಿಂದಾಗಿ ಶುಕ್ರವಾರ ತಾತ್ಕಾಲಿಕ ವಾಗಿ ಸ್ಥಗಿತಗೊಂಡಿದ್ದ ಜಮ್ಮು ಮತ್ತು ಕಾಶ್ಮೀರದ ತ್ರಿಕೂಟ ಪರ್ವತದಲ್ಲಿರುವ ಮಾತಾ ವೈಷ್ಣೋ ದೇವಿ ದೇಗುಲದ ಯಾತ್ರೆ ಶನಿವಾರ ಪುನಾರಂಭ ಗೊಂಡಿದೆ. ಸುಮಾರು 1,500 ಯಾತ್ರಿಗಳು ಬೇಸ್‌ ಕ್ಯಾಂಪ್‌ನಿಂದ ಪ್ರಯಾಣ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next