ಹೊಸದಿಲ್ಲಿ: ಭಾರತದ ತಾರಾ ಆ್ಯತ್ಲೀಟ್‌ಗಳಾದ ಮೊಹಮ್ಮದ್ ಅನಾಸ್ ಮತ್ತು ಹಿಮಾ ದಾಸ್ ಜೆಕ್ ಗಣರಾಜದ್ಯದಲ್ಲಿ ನಡೆಯುತ್ತಿರುವ “ಆ್ಯತ್ಲೆಟಿಕಿ ಮಿಟಿಂಕ್ ರೀಟರ್’ ಕೂಟದಲ್ಲಿ ಬಂಗಾರದಿಂದ ಸಿಂಗಾರ ಗೊಂಡಿದ್ದಾರೆ. ಅನಾಸ್ ಮತ್ತು ಹಿಮಾ ಇಬ್ಬರೂ 300 ಮೀ. ರೇಸ್‌ನಲ್ಲಿ ಚಿನ್ನದ ಪದಕ ಗೆದ್ದು ಮೆರೆದರು.
24ರ ಹರೆಯದ ಅನಾಸ್ ಈ ದೂರವನ್ನು 32.41 ಸೆಕೆಂಡ್‌ಗಳಲ್ಲಿ ಕ್ರಮಿಸಿ ಮೊದಲಿಗರಾದರು. ಇದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೋರ್ವ ಓಟಗಾರ ನಿರ್ಮಲ್ ತೋಮ್ 33.03 ಸೆಕೆಂಡ್ ಸಾಧನೆಗೈದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಮೊಹಮ್ಮದ್ ಅನಾಸ್ ಶನಿವಾರ ವಷ್ಟೇ 2019ನೇ ಸಾಲಿನ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ರವಿವಾರದ ಬಂಗಾರ ಬೇಟೆಯಿಂದ ಅವರ ಸಂಭ್ರಮ ಇಮ್ಮಡಿಗೊಂಡಿದೆ. ಪದಕ ಗೆದ್ದ ಇಬ್ಬರೂ ಸಾಧಕರನ್ನು “ಸಾಯ್’, ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜುಜು ಅಭಿನಂದಿಸಿದ್ದಾರೆ.
ಇದು ಸತತ 2 ವಿದೇಶಿ ಕೂಟಗಳಲ್ಲಿ ಮೊಹಮ್ಮದ್ ಅನಾಸ್ ಗೆದ್ದ 2ನೇ ಚಿನ್ನವಾಗಿದೆ. ಇದಕ್ಕೂ ಮುನ್ನ “ಕುಂಟೊ ಆ್ಯತ್ಲೆಟಿಕ್ಸ್ ಮೀಟ್’ನ 200 ಮೀ. ಸ್ಪರ್ಧೆಯಲ್ಲಿ (21.16 ಸೆಕೆಂಡ್ಸ್) ಬಂಗಾರದ ಸಾಧನೆಗೈದಿದ್ದರು.
ಹಿಮಾಗೆ 6ನೇ ಚಿನ್ನ
ಇಂದಿನ ಸಾಧನೆಯೊಂದಿಗೆ ಹಿಮಾ ದಾಸ್ ಜುಲೈ ಎರಡರ ಬಳಿಕ ಯುರೋಪಿಯನ್ ರೇಸ್‌ನಲ್ಲಿ 6ನೇ ಚಿನ್ನದ ಪದಕವನ್ನು ಗೆದ್ದಂತಾಯಿತು.”300 ಮೀ. ರೇಸ್‌ನಲ್ಲಿ ನಾನು ಮೊದಲಿಗಳಾಗಿ ಸ್ಪರ್ಧೆ ಮುಗಿಸಿದ್ದೇನೆ’ ಎಂಬುದಾಗಿ ಹಿಮಾ ದಾಸ್ ಟ್ವೀಟ್ ಮಾಡಿದ್ದಾರೆ.