ಉದಯವಾಣಿ ಸಮಾಚಾರ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದ ಶಿರೂರು ಗ್ರಾಮದ ಬಳಿಯ ಗುಡ್ಡ ಕುಸಿತದಿಂದ ಶಿರೂರು ಹಾಗೂ ಉಳುವರೆ ಗ್ರಾಮದಲ್ಲಿ ಆದ ಹಾನಿ ಕಣ್ಣಲ್ಲಿ ನೀರು ತರಿಸುತ್ತಿದೆ. ಅದರಲ್ಲೂ ಉಳುವರೆ ಗ್ರಾಮ ದಾಖಲೆಯಲ್ಲಿ ಮಾತ್ರ ಉಳಿದಿದೆ!
ಗಂಗಾವಳಿ ನದಿಯ ಮತ್ತೊಂದು ದಂಡೆಯಲ್ಲಿರುವ ಗ್ರಾಮ ಉಳುವರೆಯಲ್ಲಿ ಆದ ಅನಾಹುತ ಅಷ್ಟಿಷ್ಟಲ್ಲ. ಇಡೀ ಗ್ರಾಮ ಈಗ ಸ್ಮಶಾನದಂತಾಗಿದೆ. ಹೆದ್ದಾರಿಯ ಈ ಭಾಗದಲ್ಲಿ ಕುಸಿದ ಗುಡ್ಡ ಗಂಗಾವಳಿಯ ಆಚೆ ದಡದಲ್ಲಿದ್ದ ನಾಲ್ಕು ಮನೆಯನ್ನು ಸಂಪೂರ್ಣ ನಾಶ ಮಾಡಿದೆ. ಗುಡ್ಡದ ಮಣ್ಣು ಗಂಗಾವಳಿ ನದಿಯಲ್ಲಿ ತುಂಬಿ ನೀರು-ಮಣ್ಣು ಉಳುವರೆಗೆ ಅಪ್ಪಳಿಸಿದ್ದು ಅಲ್ಲಿಯ ಜನರ ಬದುಕನ್ನೇ ಆಪೋಶನ ತೆಗೆದುಕೊಂಡಿದೆ.
ಓಡಿ ಹೋಗಿ ಬದುಕುಳಿದರು: ಗುಡ್ಡದ ಮಣ್ಣು ಸಣ್ಣಿ ಹನುಮಂತ ಗೌಡ (60) ಎಂಬುವವರ ಮನೆಯನ್ನು ಬಾಚಿಕೊಂಡು ನದಿ ಸೇರಿದೆ. ಆಕೆಯ ಮಗ ಮಂಜುನಾಥ ಗೌಡ ಅವಘಡದ ವೇಳೆ ಅಂಗಡಿಗೆ ತೆರಳಿದ್ದರಿಂದ ಬದುಕುಳಿದಿದ್ದಾನೆ.
ಸಣ್ಣಿ ಯಾನೆ ಸಣ್ಣು ಗೌಡರ ಪಕ್ಕದ ಸಂಬಂಧಿಕರು ನೀಲಾ ಮತ್ತು ಸಾವಿತ್ರಿ ದಂಪತಿ, ಮಗಳು ದಿವ್ಯಾ ಜೊತೆಗೆ ಮನೆಯ ಹಿಂದಿನ ಗುಡ್ಡದ ಎತ್ತರದ ಭಾಗಕ್ಕೆ ಓಡಿದ್ದಾರೆ. ಆದರೂ ರಭಸದಿಂದ ಬಂದ ನೀರಿನ ಅಲೆ, ಮಣ್ಣು-ಕಲ್ಲಿನ ಚೂರು ಬಡಿದು ಆಸ್ಪತ್ರೆ ಸೇರಿದ್ದಾರೆ. ಅದೇ ಗ್ರಾಮದ ಹಲವರದ್ದು ಇದೇ ಪರಿಸ್ಥಿತಿ. ಉಳುವರೆಯ ಗ್ರಾಮದ 14 ಜನ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಧರೆ ಕುಸಿತದ ವೇಳೆ ಕಲ್ಲು-ಮಣ್ಣು, ನದಿ ನೀರು ಮನೆಗಳ ಮೇಲೆ ಸುನಾಮಿಯಂತೆ ನುಗ್ಗಿದೆ. ಬದುಕುಳಿಯಲು ಜನ ಎತ್ತರ ಪ್ರದೇಶಕ್ಕೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಗುಡ್ಡ ಕುಸಿತಕ್ಕೆ ಇಡೀ ಗ್ರಾಮದ ಮೂಲ ನೆಲೆಯೇ ಉಡುಗಿ ಹೋಗಿದೆ. ನದಿ ದಂಡೆ ಅಬ್ಬರಿಸುತ್ತಿದೆ. ಆಕಾಶ ಕಳಚಿ ಬಿದ್ದಂತ ಅನುಭವ ಗ್ರಾಮಸ್ಥರಿಗಾಗಿದೆ. ಉಳುವರೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಅರ್ಧಗಂಟೆಯಲ್ಲಿ ಎಲ್ಲ ಕೊಚ್ಚಿಹೋಗಿತ್ತು: ನೀಲಾ ಗೌಡ ನನ್ನ ಸಹೋದರ. ಮಗಳು ದಿವ್ಯಾ ಮದುವೆಗೆ ಬಂಗಾರ, ಹಣ ಕೂಡಿಟ್ಟಿದ್ದರು. ಹಠಾತ್ ಬಡಿದ ಈ ಧರೆಯ ಸುನಾಮಿ ಆಘಾತದಿಂದ ಅವರು ಬದುಕಿದ್ದೇ ಹೆಚ್ಚು. ಬಹುದೊಡ್ಡ ಶಬ್ದ ವಿಪರೀತವಾಗಿ ಸುರಿವ ಮಳೆಯ ಮಧ್ಯೆ ಕೇಳಿಸಿತು. ನಾವು ನದಿಯೇ ಮನೆ ಬಾಗಿಲಿಗೆ ಬಂದಾಗ ಎತ್ತರ ಪ್ರದೇಶಕ್ಕೆ ಓಡಿದ್ದೆವು. ಅರ್ಧಗಂಟೆ ಅಂತರದಲ್ಲಿ ಬಂದು ನೋಡಿದಾಗ ಮನೆಯೇ ಇರಲಿಲ್ಲ. ಟಿವಿ, ಫ್ರಿಡ್ಜ್, ಮನೆಯ ಸಾಮಾನು ನದಿಯಲ್ಲಿ ತೇಲಿ ಹೋದವು. ಬದುಕಿದವರು ಆಸ್ಪತ್ರೆ ಸೇರಿದರು ಎಂದು ನೀಲಾ ಮುದ್ದು ಗೌಡರ ಸಹೋದರ ಹುಲಿಯಪ್ಪ ಗೌಡ ಕಣ್ಣೀರು ಹಾಕುತ್ತ ಘಟನೆ ವಿವರಿಸುತ್ತಾರೆ.
ಸಣ್ಣಿ ಗೌಡರ ಮಗ ಮಂಜುನಾಥ ಗೌಡ ಮನೆ ಬುನಾದಿ ಮೇಲೆ ಕುಳಿತು ಮೌನವಾಗಿದ್ದ. ಅತನ ಸುತ್ತ ಸಾಕಿದ ನಾಯಿ ಸುಳಿದಾಡುತ್ತಿತ್ತು. ಕೂಲಿ ಮಾಡಿ ಬದುಕುತ್ತಿದ್ದ ಮಂಜುನಾಥ ಈಗ ತಾಯಿಗಾಗಿ ಕಾಯುತ್ತಿದ್ದಾನೆ. ತಾಯಿ ಬದುಕಿ ಬರಬಹುದು ಎಂಬ ಆಶಯ ಆತನಲ್ಲಿದೆ.
ಇಡೀ ಗ್ರಾಮ ಸಶ್ಮಾನ ಸದೃಶ: ಉಳುವರೆ ಗ್ರಾಮದಲ್ಲಿ 7 ಮನೆ ಸಂಪೂರ್ಣ ನಾಶವಾಗಿದೆ. 21 ಮನೆ ಭಾಗಶಃ ನಾಶವಾಗಿದ್ದು ತೆಂಗು, ಅಡಕೆ ಮರ ನೆಲಕ್ಕೆ ಉರುಳಿವೆ. ಸ್ಥಳಕ್ಕೆ ಪಕ್ಕದ ಗ್ರಾಮದ ಜನ ಆಗಮಿಸುತ್ತಿದ್ದಾರೆ. ಅಧಿ ಕಾರಿಗಳು ಇಲ್ಲಿಗೆ ಭೇಟಿ ನೀಡಿ ಲಕ್ಷಾಂತರ ರೂ. ನಷ್ಟ ಆಗಿರುವ ಬಗ್ಗೆ ಲೆಕ್ಕ ಹಾಕುತ್ತಿದ್ದಾರೆ. ಉಳುವರೆ ಗ್ರಾಮದ ದಂಡೆಯ ಎತ್ತರದ ಸ್ಥಳದಲ್ಲಿ ಭೂಮಿ ಕೊಟ್ಟು ನಮ್ಮನ್ನು ಸ್ಥಳಾಂತರ ಮಾಡಿ ಎಂದು ಉಳಿದವರು ಒತ್ತಾಯಿಸುತ್ತಿದ್ದಾರೆ.
ಸಣ್ಣು ಗೌಡ ನನ್ನ ಅತ್ತೆ. ಆಕೆ ಕಾಣೆಯಾದ ಸುದ್ದಿ ತಿಳಿದು ನೋಡಲು ಬಂದೆ. ಮನೆಯೇ ಕಾಣೆಯಾಗಿದೆ. ಆಕೆ ಎಲ್ಲಿ ಹೋದಳು ಎಂದು ಚಿಂತೆಯಾಗಿದೆ. ಮಗ ಮಂಜುನಾಥ ಅನಾಥನಾದ.
-ಲೀಲಾವತಿ ಗೌಡ,
ಬೇಲಿಕೇರಿ
ಸಣ್ಣು ಗೌಡ್ತಿ ಕಾಡಿಗೆ ಹೋಗಿ ಹೂ-ಹಣ್ಣು ತಂದು ಜೀವನ ಮಾಡ್ತಿದ್ಲು. ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಘಟನೆಯಾಗಿದೆ. ಮನೆಯೇ ಕೊಚ್ಚಿ ಹೋದುದ್ದನ್ನು ನಂಬಲಾಗುತ್ತಿಲ್ಲ.
-ತುಳಸಿ ಗೌಡ,
ಸಣ್ಣು ಗೌಡ್ತಿ ಸಂಬಂಧಿ
ಇದನ್ನೂ ಓದಿ:landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ
-ನಾಗರಾಜ್ ಹರಪನಹಳ್ಳಿ