Advertisement

ನೀರಿನ ರಭಸಕ್ಕೆ ಗುಡ್ಡ ಕುಸಿತ : 2ನೇ ಮೊಣ್ಣಂಗೇರಿಯಲ್ಲಿ ಆತಂಕ; ಶಾಸಕರ ಭೇಟಿ

06:52 PM Jul 19, 2022 | Team Udayavani |

ಮಡಿಕೇರಿ: 2018 ರ ಮಹಾಮಳೆಯಲ್ಲಿ ಜಲಸ್ಫೋಟ ಸಂಭವಿಸಿದ್ದ ಮಡಿಕೇರಿ ತಾಲ್ಲೂಕಿನ ಎರಡನೇ ಮೊಣ್ಣಂಗೇರಿ ಗ್ರಾಮದಲ್ಲಿ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು, ನೀರಿನ ರಭಸಕ್ಕೆ ಗುಡ್ಡ ಕುಸಿದಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

Advertisement

ಈ ಭಾಗದ ನಿವಾಸಿಗಳ ಪ್ರಕಾರ ಮಳೆ ಕ್ಷೀಣಗೊಂಡಿದ್ದರೂ ರಾತ್ರಿ 7.30 ರ ಹೊತ್ತಿಗೆ ಜೋರಾದ ಶಬ್ಧ ಬಂದಿದೆ. ಹೊರಗೆ ಬಂದು ನೋಡಿದಾಗ ಗುಡ್ಡ ಕುಸಿದು ಪ್ರವಾಹದ ರೀತಿಯಲ್ಲಿ ಕೆಸರುಮಯ ನೀರು ಹರಿದು ಬಂದಿದೆ. ಮರಗಳು ಕೂಡ ಕೊಚ್ಚಿ ಬಂದಿದ್ದು, ಗ್ರಾಮದ ರಾಮಕೊಲ್ಲಿ ಸೇತುವೆ ಬಳಿ ನಿಂತಿದೆ. ಇದು ಜಲಸ್ಫೋಟವೆಂದು ವಿಶ್ಲೇಷಿಸುತ್ತಿರುವ ಗ್ರಾಮಸ್ಥರು ನಾವು ಮನೆಗಳನ್ನು ತೊರೆದು ಎಲ್ಲಿಗೆ ಹೋಗುವುದು ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಶಾಸಕರುಗಳಾದ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಕೆ.ಜಿ.ಬೋಪಯ್ಯ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಈ ವೇಳೆ ಕೆ.ಜಿ.ಬೋಪಯ್ಯ ಮಾತನಾಡಿ. 2018 ರಲ್ಲಿ 2ನೇ ಮೊಣ್ಣಂಗೇರಿ ಹಾಗೂ ಕಾಟಕೇರಿ ಭಾಗದಲ್ಲಿ ಬರೆಜರಿತವಾಗಿತ್ತು. ಮತ್ತೆ ಈ ಬಾರಿಯು ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ರಾಮಕೊಲ್ಲಿ ಸೇತುವೆ ವಿಸ್ತಾರವಾದ ಸೇತುವೆಯಾಗಿದ್ದು, ಬರೆಜರಿತದಿಂದ ಸೇತುವೆಯ ಅರ್ಧ ಭಾಗ ಹಾನಿಯಾಗಿದೆ. ಬರೆಜರಿತಕ್ಕೆ ವೈಜ್ಞಾನಿಕವಾಗಿ ನಿಜವಾದ ಕಾರಣ ಪತ್ತೆ ಹಚ್ಚಬೇಕಾಗಿದೆ. ಈ ಭಾಗದ ಮನೆಗಳಿಗೆ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಮುಂಜಾಗೃತ ಕ್ರಮವಾಗಿ ಇಲ್ಲಿನ ಜನರನ್ನು  ಸ್ಥಳಾಂತರಿಸಲಾಗಿದೆ ಎಂದರು.

ಕಾಟಕೇರಿಯ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಮಾಡಲು ಸೂಚಿಸಲಾಗಿದೆ. ಈ ಭಾಗದ ಜನರು ಕೂಲಿ ಕೆಲಸ ಮಾಡುವವರಾಗಿದ್ದು, ಅವರಿಗೆ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ನೀಡಬೇಕು ಎಂದು ಕೆ.ಜಿ.ಬೋಪಯ್ಯ ಹೇಳಿದರು.

Advertisement

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಮಾತನಾಡಿ, ಮೊಣ್ಣಂಗೇರಿ ಗ್ರಾಮದಲ್ಲಿ ಹಲವು ಕುಟುಂಬಗಳು ವಾಸಿಸುತ್ತಿದ್ದಾರೆ. ಇಲ್ಲಿನ ಜನರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಈ ಭಾಗದ ಜನರು ಒಪ್ಪಿಗೆ ನೀಡಿದ್ದಲ್ಲಿ, ಮುಂದಿನ ದಿನಗಳಲ್ಲಿ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರ ಮಾಡಿಸಲಾಗುವುದು ಎಂದರು.

ನೀರಿನೊಂದಿಗೆ ಮರದ ದಿಮ್ಮಿಗಳು ಹರಿದು ಬಂದು ಸೇತುವೆಯ ಬಳಿ ನಿಂತಿದೆ. ಅದನ್ನು ಗ್ರಾ.ಪಂ. ವತಿಯಿಂದ ತೆರವು ಮಾಡಲು ಸೂಚಿಸಲಾಗುವುದು. ಅಪಾಯದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಈಗಾಗಲೇ ಅವರವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.

ಪ್ರಮುಖರಾದ ಧನಂಜಯ ಅಗೋಳಿಕಜೆ, ಗ್ರಾ.ಪಂ ಸದಸ್ಯರಾದ ಪುಷ್ಪಾವತಿ, ಪಿಡಿಒ ಶಶಿಕಿರಣ ಇತರರು ಇದ್ದರು.

ಮೇಕೇರಿ-ತಾಳತ್ತಮನೆ ಮಾರ್ಗದಲ್ಲಿ ಬಿರುಕು ಬಿಟ್ಟಿರುವ ರಸ್ತೆಯನ್ನು ಕೂಡ ಶಾಸಕದ್ವಯರು ವೀಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next