Advertisement

ವಿವಿಧೆಡೆ ಹೈಕ ವಿಮೋಚನಾ ದಿನಾಚರಣೆ

01:15 PM Sep 18, 2018 | Team Udayavani |

ಯಾದಗಿರಿ: ಯಾದಗಿರಿ, ಶಹಾಪುರ, ಸುರಪುರ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದ್ದು, ರೈತರಿಗೆ ನಿಯಮಿತ ಅವಧಿಯಲ್ಲಿ ಬರ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ. ಪಾಟೀಲ ಹೇಳಿದರು.

Advertisement

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಸಮಿತಿ, ಭಾವೈಕ್ಯತಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 71ನೇ ಹೈದ್ರಾಬಾದ್‌ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸರ್ಕಾರ ರೈತರ ಪರವಾಗಿದ್ದು, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಜಿಲ್ಲೆಗೆ ಸರ್ಕಾರ ಸಾಕಷ್ಟು ಅನುದಾನ ಒದಗಿಸಿದೆ. ಪ್ರತಿಯೊಂದು ಇಲಾಖೆಯಲ್ಲಿ ಅಭಿವೃದ್ಧಿ ಕಾಮಗಾರಿ ತೃಪ್ತಿಕರವಾಗಿ ಪ್ರಗತಿಯಲ್ಲಿವೆ. ವಿಶೇಷವಾಗಿ ವಸತಿ ಯೋಜನೆಯಡಿ ಮನೆಗಳ ನಿರ್ಮಾಣದಲ್ಲಿ ಯಾದಗಿರಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ
ಸ್ಥಾನದಲ್ಲಿದೆ ಎಂದರು. ನಿಜಾಮರ ಕಾಲದಿಂದಲೂ ಹೈದ್ರಾಬಾದ್‌-ಕರ್ನಾಟಕ ಹಿಂದುಳಿದ ಪ್ರದೇಶವಾಗಿದ್ದು, ಸಂವಿಧಾನದ ತಿದ್ದುಪಡಿ ಕಲಂ 371 (ಜೆ) ಪ್ರಕಾರ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ 2013ರ ನವೆಂಬರ್‌ 6ರಂದು ಪುನರ್‌ ರಚಿತಗೊಂಡು ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಲ್ಲಿ ಪರಿಣಾಮಕಾರಿಯಾಗಿ
ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಾ ಕಾರ್ಯ ನಿರ್ವಹಿಸುತ್ತಿದೆ. ಹಿಂದುಳಿದ ನಮ್ಮ ಪ್ರದೇಶದ ಅಭಿವೃದ್ಧಿಗಾಗಿ ಸರ್ವರ ಸಹಕಾರ ಅಗತ್ಯವಾಗಿದೆ ಎಂದರು.

ಯಾದಗಿರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಹೆಚ್‌ಕೆಆರ್‌ಡಿಬಿ ವತಿಯಿಂದ 15 ಲಕ್ಷ ರೂ. ವೆಚ್ಚದ 32 ಆಸನಗಳ ಪತ್ರಿಕಾ ಪ್ರವಾಸದ ಬಸ್‌ ನೀಡಲಾಗಿದೆ ಎಂದು ತಿಳಿಸಿದರು. 1947ರಲ್ಲಿ ಭಾರತ ಸ್ವಾತಂತ್ರ್ಯಾ ಪಡೆದಾಗ ಭಾರತದಲ್ಲಿನ ದೇಶೀಯ ಸಂಸ್ಥಾನಗಳು ಭಾರತ ಸರ್ಕಾರದ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಈ ಸಂದರ್ಭದಲ್ಲಿ ಉಕ್ಕಿನ ಮನುಷ್ಯರೆಂದೇ ಖ್ಯಾತರಾದ ಅಂದಿನ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲರು, ದೇಶದ ಹಿತದೃಷ್ಟಿ ಹಾಗೂ ಸ್ಥಳೀಯರ ಆಶಯದಂತೆ ಹೈದ್ರಾಬಾದ್‌ ನಿಜಾಮ ಮೀರ್‌ ಉಸ್ಮಾನ ಅಲಿಖಾನ್‌ ಆಸೀಫ್‌ ಝಾ ವಿರುದ್ಧ ಭಾರತ ಸೇನೆ ಬಳಸಿ 1948ರ ಸೆಪ್ಟೆಂಬರ್‌ 13ರಿಂದ 17ರ ವರೆಗೆ 5 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಹೈದ್ರಾಬಾದನ್ನು ವಶಪಡಿಸಿಕೊಂಡು ಭಾರತದ ಒಕ್ಕೂಟಕ್ಕೆ ಸೇರಿಸಿದರು. ಹೈದ್ರಾಬಾದ್‌-ಕರ್ನಾಟಕದ ಭಾಗಲ್ಲೆ 1948ರ ಸೆಪ್ಟೆಂಬರ್‌ 17ರಂದು ಸ್ವಾತಂತ್ರ್ಯಾಲಭಿಸಿತು ಎಂದು ತಿಳಿಸಿದರು.

ಈ ಭಾಗದ ಕೊಲ್ಲೂರ ಮಲ್ಲಪ್ಪ, ಈಶ್ವರ್‌ ಲಾಲ್‌ ಭಟ್ಟಡ್‌, ಸರದಾರ ಶರಣಗೌಡ ಪಾಟೀಲ ಇನಾಂದಾರ, ವಿಶ್ವನಾಥರೆಡ್ಡಿ ಮುದ್ನಾಳ, ಜಗನ್ನಾಥರಾವ ಚಂಡ್ರಿಕಿ, ಕಿಶನರಾವ ಮಹೇಂದ್ರಕರ್‌, ಕೊಪ್ಪಳದ ಕಾಶಿನಾಥರಾವ್‌, ಚಂದ್ರಶೇಖರ ಪಾಟೀಲ ಮುಂತಾದವರ ಹೋರಾಟದ ಫಲದಿಂದ ಹೈಕ ಪ್ರದೇಶ ವಿಮೋಚನೆಗೊಂಡು ನಾವು ಭಾರತದ ಒಕ್ಕೂಟಕ್ಕೆ
ಸೇರಿದ್ದೇವೆ ಎಂದು ಹೋರಾಟಗಾರರನ್ನು ಸ್ಮರಿಸಿದರು.

Advertisement

ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷ ಬಸರೆಡ್ಡಿಗೌಡ ಮಾಲಿಪಾಟೀಲ ಅನಪುರ, ಮಾಜಿ ಉಪ ಸಭಾಪತಿ ಡೇವಿಡ್‌ ಸಿಮಿಯೋನ್‌, ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌, ಸಿಇಒ ಡಾ| ಅವಿನಾಶ್‌ ಮೆನನ್‌ ರಾಜೇಂದ್ರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ಜಿ. ರಜಪೂತ, ಸಹಾಯಕ ಆಯುಕ್ತ ಡಾ| ಬಿ.ಎಸ್‌.ಮಂಜುನಾಥ ಸ್ವಾಮಿ, ಜಿಪಂ ಉಪ ಕಾರ್ಯದರ್ಶಿ ವಸಂತರಾವ್‌ ವಿ. ಕುಲಕರ್ಣಿ, ಪೌರಾಯುಕ್ತ ಸಂಗಪ್ಪ ಉಪಾಸೆ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ಲಿಂಗೇರಿ ಸ್ಟೇಷನ್‌ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತ ಪಡಿಸಿದರು. ಉಪನ್ಯಾಸಕಿ ಡಾ| ಜ್ಯೋತಿಲತಾ ತಡಿಬಿಡಿಮಠ ಸ್ವಾಗತಿಸಿ, ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು. ಹಿಂದಿನ ಸರ್ಕಾರದಲ್ಲಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತಿವರ್ಷ 1,500 ಕೋಟಿ ರೂ. ಬಿಡುಗಡೆ ಮಾಡಿತ್ತು. ಈ ವರ್ಷವೂ ಕೂಡ 1,500 ಕೋಟಿ ರೂ. ಬಿಡುಗಡೆಯಾಗಲಿದ್ದು, ಹೆಚ್‌ಕೆಆರ್‌ಡಿಬಿನಿಂದ ಯಾದಗಿರಿ ಜಿಲ್ಲೆಗೆ 2013-14ನೇ ಸಾಲಿನಿಂದ 2017-18ರ ವರೆಗೆ 445.90 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ಅದರಲ್ಲಿ 353.34 ಕೋಟಿ ರೂ. ಬಿಡುಗಡೆಯಾಗಿದೆ. 241.14 ಕೋಟಿ ರೂ. ವೆಚ್ಚವಾಗಿ ಶೇ. 68ರಷ್ಟು ಪ್ರಗತಿ ಸಾಧಿಸಲಾಗಿದೆ.  ರಾಜಶೇಖರ ಬಿ. ಪಾಟೀಲ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next