ಸಿಂಧನೂರು: ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯ ಸೇರಿ ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಹೈದ್ರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ಸಿಗುತ್ತಿಲ್ಲ. ಈ ಭಾಗದ ವಿದ್ಯಾರ್ಥಿಗಳು ಹೈಕ ವಿಶೇಷ ಸ್ಥಾನಮಾನದ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ ಹೇಳಿದರು.
ನಗರದ ಅನಿಕೇತನ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಕೋಟ್ಯಂತರ ಜನ ಅಕ್ಷರಸ್ಥರಿದ್ದಾರೆ. ಅಕ್ಷರಸ್ಥರೆಲ್ಲ ವಿದ್ಯಾವಂತರಲ್ಲ. ವಿದ್ಯಾರ್ಜನೆಯೇ ಬೇರೆ, ವಿದ್ಯಾವಂತಿಕೆಯ
ಲಕ್ಷಣಗಳು ಬೇರೆ-ಬೇರೆಯಾಗಿವೆ ಎಂದು ವಿಶ್ಲೇಷಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ಪ್ರಪಂಚದಲ್ಲಿ ಶೇ. 60ರಷ್ಟು ಯುವಕರನ್ನು ಹೊಂದಿದ ಭಾರತದ ಪ್ರಗತಿ ವಿದ್ಯಾರ್ಥಿಗಳನ್ನು ಅವಲಂಬಿಸಿದೆ.
ಆತ್ಮಬಲವಿರುವ ವ್ಯಕ್ತಿ ಮಾತ್ರ ಸಮಾಜವನ್ನು ಕಟ್ಟಬಲ್ಲ. ವೈಯಕ್ತಿಕ ಬದುಕಿನೊಂದಿಗೆ ಸಮಾಜವನ್ನು ಪ್ರೀತಿಸುತ್ತಾ ಬದುಕು ಕಂಡುಕೊಳ್ಳಬೇಕು. ಪರಿಶುದ್ಧ ಮನಸ್ಸು ಮತ್ತು ಜ್ಞಾನ ಹೊಂದಿದ ಮನುಷ್ಯ ಸಮಾಜವನ್ನು ಪರಿಶುದ್ಧ ಮಾಡಲು ಚಿಂತಿಸುತ್ತಾನೆ. ಯಾವುದೇ ಕೆಲಸ ಮಾಡಿದರೂ ಪ್ರೀತಿಯಿಂದ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡಿದರೆ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕಾಲೇಜ್ ಆಡಳಿತ ಮಂಡಳಿಯ ನಾಗರಾಜ ಮುಕ್ಕುಂದ ಪ್ರಾಸ್ತಾವಿಕ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ತಾಲೂಕು ತೋಟಗಾರಿಕೆ ಇಲಾಖೆ ಸಹಾಯಕ ಹಿರಿಯ ನಿರ್ದೇಶಕ ಬಸವರಾಜ ನಂದಿಬೇವೂರು, ವಳಬಳ್ಳಾರಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಬಸವಲಿಂಗಪ್ಪ ಹುಡೇವು, ಸೃಷ್ಟಿ ಪದವಿ ಪೂರ್ವ ಕಾಲೇಜ್ ಪ್ರಾಚಾರ್ಯ ದೊಡ್ಡಬಸವ ಸಿದ್ರಾಂಪುರ, ತುರ್ವಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜ್ ಉಪನ್ಯಾಸಕ ಶರಣಪ್ಪ, ಹೊಸಳ್ಳಿ ಇ.ಜೆ. ದಿದ್ದಗಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಾನಂದ, ಉಪನ್ಯಾಸಕ ಸಂಗಮೇಶ, ಸಂಸ್ಥೆ ಅಧ್ಯಕ್ಷ ಡಿ.ಎಚ್.ಕಂಬಳಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ರಾಜಶೇಖರ ಮಾವಿನಮಡು, ನೇತ್ರಾವತಿ ಬಸವರಾಜ, ಗ್ಯಾನಪ್ಪ ಕನ್ನಾಪೇಟಿ, ಪ್ರಾಚಾರ್ಯ ವೈ.ಎಚ್. ರಕ್ಕಸಗಿ, ತಿಮ್ಮಣ್ಣ ರಾಮತ್ನಾಳ ಇದ್ದರು. ಸಚಿವ ವೆಂಕಟರಾವ್ ನಾಡಗೌಡ, ಹೈಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ, ತಾಲೂಕು ಕಾರ್ಯುನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಬೆನ್ನೂರು ಸೇರಿ ಅನೇಕ ಗಣ್ಯರನ್ನು ಗೌರವಿಸಲಾಯಿತು.
ಹೈದರಾಬಾದ್ ಕರ್ನಾಟಕ ಭಾಗ ಹೊರತುಪಡಿಸಿ ಇತರ ವಿಶ್ವವಿದ್ಯಾಲಯಗಳಲ್ಲಿ ಈ ಭಾಗದ ವಿದ್ಯಾರ್ಥಿಗಳಿಗೆ ಶೇ. 8ರಷ್ಟು ಮೀಸಲಾತಿ ಇದೆ. ಈ ಸೌಕರ್ಯವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
ರಜಾಕ್ ಉಸ್ತಾದ್, ಹೈಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ