ಬಳ್ಳಾರಿ: ಹೈಕ ಭಾಗದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ ಕಾಂಗ್ರೆಸ್ ಪಕ್ಷಕ್ಕೆ ಆ ಭಾಗದ ಮತಗಳಿಸುವುದೇ ಮುಖ್ಯ ಧ್ಯೇಯವಾಗಿದೆ ಎಂದು ಉತ್ತರ ಪ್ರದೇಶದ ರಾಜ್ಯಸಭೆ ಸದಸ್ಯ ಜಿ.ವಿ.ಎಲ್.ನರಸಿಂಹರಾವ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹೈಕ ಭಾಗಕ್ಕೆ ಸಂವಿಧಾನದ ಅಧಿನಿಯಮ ಅಡಿಯಲ್ಲಿ 371(ಜೆ) ವಿಶೇಷ ಸ್ಥಾನಮಾನ ದೊರೆತಿದ್ದರೂ, ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ವಿಶೇಷ ಪ್ರಾತಿನಿಧ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಈ ಭಾಗವನ್ನು ಕೇವಲ ತಮ್ಮ ಪಕ್ಷದ ವೋಟ್ ಬ್ಯಾಂಕ್ ಆಗಿ ಮಾಡಿಕೊಳ್ಳುವಲ್ಲಿ ಮುಂದಾಗಿದೆ ಎಂದು ದೂರಿದರು.
ಹೈಕ ಭಾಗದ ಪ್ರಮುಖ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಪುತ್ರನಿಗೆ ಸಚಿವ ಸ್ಥಾನ ಕೊಡಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಸಲುವಾಗಿ ಮಾತ್ರ ಸಿಎಂ ಸಿದ್ದರಾಮಯ್ಯನವರು ಮೇಲಿಂದ ಮೇಲೆ ಹೈಕ ಭಾಗಕ್ಕೆ ಆಗಮಿಸುತ್ತಿದ್ದಾರೆ ಎಂದು ಆರೋಪಿಸಿದರು. ಹೈಕ ಪ್ರದೇಶದ ಸಮಗ್ರ ಅಭಿವೃದ್ಧಿಯ ಬಗ್ಗೆ ಅವರ ಬಳಿ ಯಾವುದೇ ಯೋಜನೆಗಳಿಲ್ಲ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಅಭಿವೃದ್ಧಿಗೆ ಕೈ ನಾಯಕರು ಶ್ರಮಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ತೆಲುಗು ಭಾಷಿಕರ ಸಂಖ್ಯೆ ಕಡಿಮೆಯಿದೆ. ನೆರೆಯ ಆಂಧ್ರಪ್ರದೇಶದವರು ಬಿಜೆಪಿ ವಿರುದ್ಧ ಪ್ರಚಾರ ಮಾಡಿದರೆ
ಯಾವುದೇ ಪರಿಣಾಮ ಬೀರಲ್ಲ. ಅಂತಹ ಪ್ರಚಾರಕ್ಕೆ ಯಾರೊಬ್ಬರು ಮಣೆ ಹಾಕಬಾರದು ಎಂದರು. ರಾಜ್ಯದಲ್ಲಿ ಬಿಜೆಪಿ ಅಲೆ ಶುರುವಾಗಿದೆ. ಎಲ್ಲೆಡೆ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ರೈತರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೇರಿದರೆ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ ನಗರ, ಗ್ರಾಮೀಣ, ಕಂಪ್ಲಿ, ಸಿರುಗುಪ್ಪ ವಿಧಾನಸಭೆ ಕ್ಷೇತ್ರಗಳ ಕ್ಷೇತ್ರಗಳ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ, ಅಭ್ಯರ್ಥಿಗಳಾದ ಜಿ.ಸೋಮಶೇಖರರೆಡ್ಡಿ, ಎಸ್.ಫಕ್ಕೀರಪ್ಪ, ಮುಖಂಡ ಎಚ್.ಹನುಮಂತಪ್ಪ ಇದ್ದರು.