Advertisement

ಹೈಕಕ್ಕೆ ಪ್ರತ್ಯೇಕ ಸಚಿವರ ನೇಮಕವಾಗಲಿ

10:23 AM Feb 01, 2018 | Team Udayavani |

ಕಲಬುರಗಿ: ಹೋರಾಟದ ಫಲವಾಗಿ ಪಡೆಯಲಾದ 371ನೇ (ಜೆ) ವಿಧಿ ಅಭಿವೃದ್ಧಿಗೆ ಪೂರಕವಾಗಿದೆಯಾದರೂ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವರ ನೇಮಕ ಮಾಡುವುದು ಅಗತ್ಯವಾಗಿದೆ ಎಂದು ಎಚ್ಕೆಸಿಸಿಐ
ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಹೈಕ ಪ್ರದೇಶದ 371 (ಜೆ) ಅನುಷ್ಠಾನದಲ್ಲಿನ ಸಮಸ್ಯೆ ಸವಾಲುಗಳು’ ಎನ್ನುವ ವಿಭಾಗ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಮುಖ ಭಾಷಣಕಾರರಾಗಿ ಅವರು ಮಾತನಾಡಿದರು.

ಹೈಕ ಭಾಗದ ಅಭಿವೃದ್ಧಿಗಾಗಿ ಒದಗಿಸಲಾಗಿರುವ ಕಲಂ 371(ಜೆ)ನೇ ಕಲಂ ಹಲ್ಲಿಲ್ಲದ ಹಾವಿನಂತಾಗಿದೆ.
ಇದರಲ್ಲಿರುವ ನೂನ್ಯತೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಇದರಿಂದ ಯಾವ ಪ್ರಯೋಜನವು ಈ ಭಾಗದ ಜನತೆಗೆ
ಆಗುವುದಿಲ್ಲ. ಆದ್ದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈ ಭಾಗದ ಜನತೆಗೆ ನ್ಯಾಯ ದೊರಕಿಸಿ ಕೊಡಬೇಕಾದರೆ ತಮ್ಮ ಇಚ್ಛಾಶಕ್ತಿ ಪ್ರದರ್ಶಿಸುವುದು ಅಗತ್ಯವಾಗಿದೆ ಎಂದರು.

ರಾಜ್ಯ ಸರ್ಕಾರವು ಉದ್ಯೋಗದ ವಿಷಯದಲ್ಲಿ ಸುಳ್ಳು ಹೇಳುತ್ತಿದೆ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಾಗಿ ಹೇಳಿದ ಸರ್ಕಾರ ಇಲ್ಲಿಯವರೆಗೆ ಕೇವಲ 18993 ಹುದ್ದೆಗಳನ್ನು ಮಾತ್ರ ತುಂಬಿಕೊಂಡಿದೆ.

ಕಲಂ 371(ಜೆ)ರ ಅಡಿ ಸಮರ್ಪಕ ಅನುಷ್ಠಾನಕ್ಕಾಗಿ ನೇಮಿಸಿರುವ ಸಂಪುಟ ಉಪ ಸಮಿತಿಯಲ್ಲಿ ಬೇರೆ ಭಾಗದವರು ಅಧ್ಯಕ್ಷರಾಗಿರುವುದರಿಂದ ತೊಂದರೆ ಉಂಟಾಗುತ್ತಿದೆ. ಈ ತಾರತಮ್ಯ ಹೋಗಲಾಡಿಸಬೇಕಾದರೆ ಉಪಸಮಿತಿಗೆ ಈ ಭಾಗದವರನ್ನೇ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹೇಳಿದರು. 

Advertisement

ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಶರಣಬಸವ ವಿಶ್ವ ವಿದ್ಯಾಲಯದ ಕುಲಸಚಿವ ಡಾ| ಅನಿಲಕುಮಾರ ಬಿಡವೆ, ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಅಳಿಸಿ ಹಾಕಲು ಶಿಕ್ಷಣವೊಂದೇ ಪ್ರಬಲ ಸಾಧನವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆದು ಈ ಭಾಗವನ್ನು ಸಮೃದ್ಧಗೊಳಿಸಬೇಕು ಎಂದು ನುಡಿದರು. ಡಾ| ಬಸವರಾಜ ಕುಮೂ°ರ, ಸಂಗೀತಾ ಕಟ್ಟಿ, ಎಸ್‌.ಎ. ಪಾಳೇಕಾರ, ಆಯ್‌.ಎಸ್‌. ವಿದ್ಯಸಾಗರ ಸಂಪನ್ಮೂಲ ವ್ಯಕ್ತಿಗಳಾಗಿ ಅಗಮಿಸಿ, ತಮ್ಮ ವಿಚಾರ ಮಂಡಿಸಿದರು.

ನಗರದ 15 ಕಾಲೇಜುಗಳ 30 ವಿದ್ಯಾರ್ಥಿಗಳು ಕಲಂ 371(ಜೆ)ನೇ ಕಲಂ ಕುರಿತು ಪ್ರಬಂಧ ಮಂಡಿಸಿದರು.
ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು
ಪ್ರಾರ್ಥಿಸಿದರು, ಪ್ರೊ| ಎನ್‌.ಎಸ್‌. ಹೂಗಾರ ಸ್ವಾಗತಿಸಿದರು. ಡಾ| ಪುಟ್ಟಮಣಿ ದೇವಿದಾಸ ನಿರೂಪಿಸಿದರು, ಡಾ| ಎಸ್‌. ಎಸ್‌. ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next