Advertisement

ಹೈ.ಕ. ಇತಿಹಾಸ ರಚನೆಗೆ ಶೀಘ್ರ ಕಾರ್ಯಾಗಾರ

11:56 AM Aug 31, 2018 | |

ಕಲಬುರಗಿ: ಹೈದ್ರಾಬಾದ ಕರ್ನಾಟಕ ಪ್ರದೇಶದ ಸಮಗ್ರ ಇತಿಹಾಸ ರಚಿಸುವ ನಿಟ್ಟಿನಲ್ಲಿ ಶೀಘ್ರವೇ ಕಾರ್ಯಾಗಾರ ಏರ್ಪಡಿಸಿ ಪರಿಣಿತರಿಂದ ಅಭಿಪ್ರಾಯ ಸಂಗ್ರಹಿಸಿ ಇತಿಹಾಸ ರಚನೆಗೆ ಮುಂದಾಗಬೇಕೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ತಿಳಿಸಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ಇತಿಹಾಸ ರಚನಾ ಸಮಿತಿ ಸಭೆಯ ಅಧ್ಯಕ್ಷತೆ
ವಹಿಸಿ ಮಾತನಾಡಿದ ಅವರು, ಹೈದ್ರಾಬಾದ ಕರ್ನಾಟಕದ ಇತಿಹಾಸದ ಮಾಹಿತಿ ಸಂಗ್ರಹಣೆ ಸುಲಭವಾದ ಕೆಲಸವಲ್ಲ. ಈ ಭಾಗದ ಎಲ್ಲ ವಿಷಯಗಳನ್ನು ಸಂಗ್ರಹಿಸುವುದು ಅವಶ್ಯಕವಾಗಿದೆ. ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಯ ವಿದ್ವಾಂಸರನ್ನು ಕಾರ್ಯಾಗಾರಕ್ಕೆ ಆಹ್ವಾನಿಸಿ ಅವರಿಂದ ಸಮಗ್ರ ಚಿತ್ರಣ ಪಡೆಯಬೇಕು ಎಂದರು.

ಹೈದ್ರಾಬಾದ ಕರ್ನಾಟಕದ ಇತಿಹಾಸವು ಕನ್ನಡ, ಉರ್ದು, ಪರ್ಶಿಯನ್‌, ಮರಾಠಿ ಹಾಗೂ ಈ ಭಾಗದ ಇನ್ನಿತರೆ ಭಾಷೆಗಳಲ್ಲಿ ಸಂಗ್ರಹವಾಗಿದೆ. ಅವುಗಳನ್ನು ಸಂಗ್ರಹಿಸುವ ಮೂಲಕ ಹೈ.ಕ. ಭಾಗದ ಸಂಪೂರ್ಣ ಇತಿಹಾಸದ ಮಾಹಿತಿ ಸಂಗ್ರಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳಿಗೆ ತಮ್ಮ ಜಿಲ್ಲೆಗೆ ಸಂಬಂಧಿಸಿದ ಇತಿಹಾಸದ ದಾಖಲೆಗಳನ್ನು ಸಲ್ಲಿಸಲು ತಿಳಿಸಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೈ.ಕ. ಭಾಗದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಿದ್ದಲ್ಲಿ ಮಾಹಿತಿ ಸಂಗ್ರಹಕ್ಕೆ ಅನುಕೂಲವಾಗುವುದು ಎಂದರು. ಇತಿಹಾಸ ರಚನಾ ಸಮಿತಿಯಲ್ಲಿ ಹೈಕ ಭಾಗದ ಎಲ್ಲ ಜಿಲ್ಲೆಯ ಪರಿಣಿತರು ಈ ಸಮಿತಿ ಸದಸ್ಯರಾಗಿದ್ದಾರೆ. ಆಯಾ ಜಿಲ್ಲೆಯ ಸದಸ್ಯರು ಜಿಲ್ಲಾ ಸಮಿತಿಗಳಲ್ಲಿ ಪಾಲ್ಗೊಂಡು
ಇತಿಹಾಸ ರಚನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ನೀಡಿದಲ್ಲಿ, ವಿಭಾಗ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಕ್ರೋಢೀಕರಿಸಲು ಅನುಕೂಲವಾಗುವುದು ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ| ಸಿ. ಸೋಮಶೇಖರ, ಹೈದ್ರಾಬಾದಕರ್ನಾಟಕ ಇತಿಹಾಸ ರಚನಾ ಸಮಿತಿ ಸದಸ್ಯ ಕಾರ್ಯದರ್ಶಿ ಲಕ್ಷ್ಮಣ ದಸ್ತಿ, ಸದಸ್ಯರಾದ ಡಾ| ಮಾಜಿದ ಡಾಗಿ, ಎನ್‌.ಎ. ವಹಾಬ್‌ ಅಂದಲೀಬ್‌, ಡಾ| ಮೊಹಮ್ಮದ ನಜರುಲ್ಲಾ ಬಾರಿ, ಡಾ| ಬಿ.ಸಿ. ಮಹಾಬಲೇಶ್ವರಪ್ಪ, ಡಾ| ರಾಜೇಂದ್ರ ಪ್ರಸಾದ, ಕೆ.ಎಸ್‌.ಎನ್‌. ಚಿಕ್ಕೆರೂರು ಪಾಲ್ಗೊಂಡಿದ್ದರು.  ಸಮಿತಿ ಸದಸ್ಯರ ಸಲಹೆ  ಸಮಿತಿ ಸದಸ್ಯರು ಕೆಲವು ನಿರ್ದಿಷ್ಟ ಕ್ಷೇತ್ರದಲ್ಲಿ ಪರಿಣಿತರಾಗಿದ್ದು, ಅವರಿಗೆ ಇಷ್ಟವಿರುವ ಕ್ಷೇತ್ರಗಳಲ್ಲಿ ತೊಡಗಿಸಬೇಕು. ಅಂದರೆ, ಹೈಕ ಸ್ವಾತಂತ್ರ್ಯಾ ಚಳವಳಿ ಇತಿಹಾಸ, ಹೈಕ ಕರ್ನಾಟಕ ರಾಜ್ಯದಲ್ಲಿ ವಿಲೀನವಾದ ಇತಿಹಾಸಗಳಂತಹ ವಿಷಯಗಳು.

 ಹೈದ್ರಾಬಾದ ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವಾರು ಪುಸ್ತಕಗಳಿದ್ದು, ಅವುಗಳನ್ನು ಸಂಗ್ರಹಿಸಿ ಗ್ರಂಥಾಲಯ ಸ್ಥಾಪಿಸಬೇಕು. ಹೈದ್ರಾಬಾದ ಕರ್ನಾಟಕ ಇತಿಹಾಸ ಅತಿ ಪುರಾತನವಾಗಿದ್ದು, ಈ ಭಾಗಕ್ಕೆ ಹಲವು ರಾಜಮಹಾರಾಜರು, ಬ್ರಿಟಿಷ್‌ ಅಧಿಕಾರಿಗಳು, ಬಹಮನಿ ಸುಲ್ತಾನರು, ನಿಜಾಮರು ಕೊಡುಗೆಗಳನ್ನು
ನೀಡಿದ್ದಾರೆ. ಈ ಇತಿಹಾಸದ ಅಧ್ಯಯನ ಕೈಗೊಂಡು ಸಾಮಾಜಿಕ ವ್ಯವಸ್ಥೆ, ಐತಿಹಾಸಿಕ ವಿಷಯಗಳನ್ನು ಸಂಗ್ರಹಿಸಿ ಈ ಭಾಗದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು.  ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಸ್ವಾತಂತ್ರ್ಯಾ ಪೂರ್ವ ಹಾಗೂ ನಂತರದ ಇತಿಹಾಸ ಸಂಗ್ರಹಿಸಿ ಸಮಿತಿ ಸದಸ್ಯರಿಗೆ ವಹಿಸಿದರೆ ಅನುಕೂಲವಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next