ಬೆಂಗಳೂರು: ಕಾನೂನಿನ ಚೌಕಟ್ಟಿನಲ್ಲೇ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರದ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶ ಸರಿ ಇದೆ ಎಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಕರ್ನಾಟಕ ಶಿಕ್ಷಣ ಕಾಯ್ದೆ ಅನುಸಾರ ರಾಜ್ಯದ ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಜಾರಿಯಲ್ಲಿದೆ. ದಶಕಗಳಿಂದ ಈ ನಿಯಮವನ್ನು ಪಾಲಿಸಲಾಗುತ್ತಿದೆ. ಆದರೆ, ಮುಸ್ಲಿಂ ಮಹಿಳೆಯರ ಏಳಿಗೆ, ಸಬಲೀಕರಣ ಸಹಿಸದ ಕೆಲವು ಸಂಘಟನೆಗಳು, ವ್ಯಕ್ತಿಗಳು ಉಡುಪಿ ಕಾಲೇಜಿನ ಕೆಲ ವಿದ್ಯಾರ್ಥಿನಿಯರ ದಾರಿ ತಪ್ಪಿಸಿದ್ದರು.
ಹೀಗಾಗಿ, ರಾಜ್ಯದಲ್ಲಿ ಅನಗತ್ಯ ವಿವಾದ ಸೃಷ್ಟಿಯಾಗಿತ್ತು. ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರುವಂತಹ ವಾತಾವರಣವನ್ನು ಸೃಷ್ಟಿಸಿದ್ದರು. ಸರ್ಕಾರದ ಆದೇಶದ ಕುರಿತು ಅಡ್ವೋಕೆಟ್ ಜನರಲ್ ಹಾಗೂ ಅರ್ಜಿದಾರರ ಪರ ವಕೀಲರ ವಾದವನ್ನು ಸವಿವರವಾಗಿ ಆಲಿಸಿದ ಹೈಕೋರ್ಟ್, ಐತಿಹಾಸಿಕ ತೀರ್ಪು ನೀಡಿದೆ ಎಂದು ಹೇಳಿದರು.
ಸಮವಸ್ತ್ರವು ಮಕ್ಕಳಲ್ಲಿ ಸಮಾನತೆ, ಭಾವೈಕ್ಯತೆ ಭಾವನೆ ಮೂಡಿಸಿ ತಾರತಮ್ಯವನ್ನು ನಿವಾರಿಸಿ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುತ್ತದೆ. ಹೀಗಾಗಿ, ತರಗತಿಗಳಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸಬೇಕು ಎಂದರು.
ಸಮವಸ್ತ್ರ ನಿಯಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಉಡುಪಿ ವಿದ್ಯಾರ್ಥಿನಿಯರ ಮನವೊಲಿಸಿ ತರಗತಿಗೆ ಹಾಜರಾಗುವಂತೆ ಮನವಿ ಮಾಡುತ್ತೇವೆ. ಯಾರೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.