ಕಾಪು: ಕಾಪು ತಾಲೂಕಿನ ಮಲ್ಲಾರು ಪಕೀರಣಕಟ್ಟೆ ಸರಕಾರಿ ಸಂಯುಕ್ತ ಉರ್ದು ಪ್ರೌಢಶಾಲೆಯಲ್ಲಿ ಹಿಜಾಬ್ ವಿಚಾರದ ವಿವಾದ ಭುಗಿಲೆದ್ದಿದೆ.
ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಮಲ್ಲಾರು ಉರ್ದು ಶಾಲೆಯಲ್ಲಿ ಹಿಜಾಬ್, ಸ್ಕಾರ್ಫ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶಕ್ಕೆ ಅವಕಾಶ ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿದೆ.
ಸೋಮವಾರ ಸಮವಸ್ತ್ರದ ಶಾಲು ತಲೆಗೆ ಸುತ್ತಿಕೊಂಡು ತರಗತಿ ಪ್ರವೇಶಿಸಿದ ಮಕ್ಕಳನ್ನು ತಲೆ ಹೊದಿಕೆ ತೆಗೆದು ತರಗತಿಗೆ ಬರುವಂತೆ ಮುಖ್ಯೋಪಾಧ್ಯಾಯರು ಸೂಚಿಸಿದ್ದು, ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಲಾರು ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯ 20 ಮಂದಿ ವಿದ್ಯಾರ್ಥಿಗಳು ಸೋಮವಾರ ಹಿಜಾಬ್ ಧರಿಸಿದ್ದು, ಮುಖ್ಯೋಪಾಧ್ಯಾಯರ ಮನವಿಯನ್ನು ನಿರ್ಲಕ್ಷಿಸಿದ ಕಾರಣ ಅವರನ್ನು ಪ್ರತ್ಯೇಕವಾಗಿ ಕುಳ್ಳಿರಿಸಲಾಗಿತ್ತು. ಮಂಗಳವಾರ ಆ ವಿದ್ಯಾರ್ಥಿಗಳು ಶಾಲೆಗೆ ಬಾರದೇ ಅವರ ಪೋಷಕರು ಶಾಲೆಗೆ ಬಂದು ಮಕ್ಕಳಿಗೆ ಶಾಲಾ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ವಿನಂತಿಸಿದರು. ಈ ವೇಳೆ ಭಾರೀ ಚರ್ಚೆ ನಡೆದು ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಶಾಲೆಗೆ ಆಗಮಿಸಿದ ತಹಶೀಲ್ದಾರ್, ಡಿಡಿಪಿಐ ಅವರು ಶಿಕ್ಷಕರು ಮತ್ತು ಪೋಷಕರ ಜೊತೆಗೆ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಮಹಿಳಾ ಪೋಷಕರು ತಮ್ಮ ಮಕ್ಕಳಿಗೆ ಹಿಜಾಬ್ ಧರಿಸಿಕೊಂಡು ಬಂದು ತರಗತಿಯಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಪುರುಷ ಪೋಷಕರು ಈಗ ಇರುವಂತೆಯೇ ಶಾಲು ಧರಿಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು.
ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲ
ಪೋಷಕರ ಮತ್ತು ಶಿಕ್ಷಕರ ಜೊತೆ ಮಾತನಾಡಿದ್ದೇನೆ. ಎಲ್ಲ ಪೋಷಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದ್ದೇನೆ. ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದೇ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಲಾಗುವುದು ಎಂದು ಕಾಪು ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಹೇಳಿದ್ದಾರೆ.