Advertisement

ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಲು ಕಾಂಗ್ರೆಸ್ ನಿಂದ ಹಿಜಾಬ್ ವಿವಾದ ಸೃಷ್ಟಿ: ನಾರಾಯಣ ಗೌಡ

04:12 PM Mar 27, 2022 | Team Udayavani |

ಮೈಸೂರು: ಹಿಜಾಬ್ ವಿವಾದ ಸೃಷ್ಟಿಸಿದ್ದೇ ಕಾಂಗ್ರೆಸ್ ಪಕ್ಷ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹಿಜಾಬ್ ವಿವಾದ ಸೃಷ್ಟಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ನಾರಾಯಣಗೌಡ ವಾಗ್ದಾಳಿ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಾ ವಿಚಾರದಲ್ಲೂ ರಾಜಕೀಯ ಲಾಭ ಪಡೆಯಲು ಹೋಗುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳ ಬಳಿ ವ್ಯಾಪಾರ ನಿಷೇಧ ವಿಚಾರ ಬಂದಿರುವುದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಈ ನಿಯಮ ಬಂದಿರುವುದು. ನಾವು ಹೊಸದಾಗಿ ಯಾವುದನ್ನು ಮಾಡಿಲ್ಲ. ಕಾಂಗ್ರೆಸ್‌ನವರು ಮಾಡಿರುವ ನಿಯಮಗಳನ್ನು ನಾವು ಮುಂದುವರೆಸಿದ್ದೇವೆ ಎಂದರು.

ಸಿದ್ದರಾಮಯ್ಯನವರು ರಾಜಕೀಯ ಮಾಡಲು ಈ ರೀತಿ ಮಾತನಾಡುತ್ತಾರೆ. ಇದನ್ನೆಲ್ಲಾ ಬಿಡಬೇಕು, ಅನವಶ್ಯಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ. ವೋಟ್‌ ಬ್ಯಾಂಕ್‌ಗಾಗಿ ಈ ರೀತಿ ವಿವಾದಗಳನ್ನು ಕಾಂಗ್ರೆಸ್‌ ನವರು ಸೃಷ್ಟಿ ಮಾಡುತ್ತಾರೆ. ಇದೆಲ್ಲಾ ನಡೆಯುವುದಿಲ್ಲ ಎಂದು ಸಚಿವ ಕೆ.ಸಿ ನಾರಾಯಣಗೌಡ ಹೇಳಿದರು.

ಸಚಿವನಾಗಿರುವುದು ಸಹಿಸಲಾಗುತ್ತಿಲ್ಲ: ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್‌ಗೌಡ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ನಾರಾಯಣಗೌಡ, ನನ್ನನ್ನು ಕಂಡರೆ ಸುರೇಶ್‌ ಗೌಡಗೆ ಹೊಟ್ಟೆ ಉರಿ. ನಾನು ಸಚಿವನಾಗಿರುವುದು ಅವರಿಗೆ ಸಹಿಸಲಾಗುತ್ತಿಲ್ಲ. ದೇವೇಗೌಡರಿಗೆ ಹತ್ತಿರ ಆಗಲೆಂದು ನನ್ನನ್ನು ಬೈತಾರೆ. ನನಗೆ ಬೈದರೆ ದೇವೇಗೌಡರು ಸುರೇಶ್‌ ಗೌಡರಿಗೆ ಎನೋ ಕೊಡುಬಹುದು ಎನಿಸುತ್ತದೆ. ಅದಕ್ಕೆ ನನ್ನ ಮೇಲೆ ಸುರೇಶ್‌ ಗೌಡ ಆರೋಪ ಮಾಡುತ್ತಾರೆ ಎಂದರು.

ಇದನ್ನೂ ಓದಿ:ಬೆಂಗಳೂರು to ಕೋಲಾರ: 75ಕಿಮೀ ಸೈಕಲ್ ರ್ಯಾಲಿ ಕೈಗೊಂಡ ಸಂಸದ ತೇಜಸ್ವಿ ಸೂರ್ಯ

Advertisement

ನನ್ನ ರೀತಿ ಸಚಿವನಾಗಬೇಕೆಂದು ಆಸೆ. ಆದರೆ ಸಚಿವನಾಗಲು ಆಗಿಲ್ಲ. ಅದಕ್ಕೆ ನನ್ನ ಮೇಲೆ ಹೊಟ್ಟೆ ಉರಿ ಆಗಿದೆ. ನಾನು ಮಂಡ್ಯ ಜಿಲ್ಲೆಯಲ್ಲಿ ಮಾಡುತ್ತಿರುವ ಅಭಿವೃದ್ಧಿ ಕೆಲಸ ಅವರಿಗೆ ಸಹಿಸಲಾಗುತ್ತಿಲ್ಲ. ನಾನು ನನ್ನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸುರೇಶ್‌ ಗೌಡರ ಕ್ಷೇತ್ರ ನಾಗಮಂಗಲಕ್ಕೆ ಏತ ನೀರಾವರಿ, ಕುಡಿಯುವ ನೀರಿನ ಕೆಲಸ ಮಾಡಿದ್ದೇವೆ. ಅದನ್ನು ಸುರೇಶ್‌ ಗೌಡ ಮೊದಲು ತಿಳಿದು ಮಾತನಾಡಲಿ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next