Advertisement
ಸರಕಾರಿ ಪದವಿ ಪೂರ್ವ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಸರಕಾರದ ಆದೇಶದ ಸಲುವಾಗಿ ಆವರಣದೊಳಗೆ ಬಿಡಲು ನಿರಾಕರಿಸಲಾಯಿತು. ಒಬ್ಬ ವಿದ್ಯಾರ್ಥಿನಿ ತನಗೆ ಶಿಕ್ಷಣ ಮುಖ್ಯ ಎಂದು ಶಾಲಾ ಶಿಸ್ತಿಗೆ ಒಳಪಟ್ಟು ಹಿಜಾಬ್ ತೆಗೆದು ತರಗತಿಗೆ ಹಾಜರಾದಳು. ಎಲ್ಲರ ಮನ ಒಲಿಸಲು ನೋಡಿದ ಪ್ರಾಂಶುಪಾಲರ ಪ್ರಯತ್ನ ವಿಫಲವಾಯಿತು. ಅಂತೆಯೇ ಶಾಲು ಧರಿಸಿ ಬಂದರೆ ಪ್ರವೇಶ ಇಲ್ಲ ಎಂದು ಹೇಳಿದ್ದ ಕಾರಣ ಯಾರೂ ಶಾಲು ಧರಿಸಿ ಬರಲಿಲ್ಲ. ಸರಕಾರದ ಆದೇಶದಂತೆ ಕಾಲೇಜು ಸಮವಸ್ತ್ರ ಸಂಹಿತೆಯನ್ನು ಎಲ್ಲ ವಿದ್ಯಾರ್ಥಿಗಳು ಪಾಲಿಸಬೇಕು. ಇಲ್ಲದಿದ್ದರೆ ಪ್ರವೇಶ ಇಲ್ಲ ಎಂದು ಹೆತ್ತವರಿಗೂ, ವಿದ್ಯಾರ್ಥಿಗಳಿಗೂ ಸ್ಪಷ್ಟವಾಗಿ ಸೂಚಿಸಲಾಗಿದೆ. ಶಾಸಕರು ಹಾಗೂ ಸಚಿವರು ಖುದ್ದು ಹೆತ್ತವರ ಜತೆ ಮಾತನಾಡಿದ್ದಾರೆ. ಆದ್ದರಿಂದ ಹಿಜಾಬ್ ಧರಿಸಿ ಕಾಲೇಜು ಆವರಣ ಪ್ರವೇಶಕ್ಕೆ ನಿರ್ಬಂಧ ಹೇರಲಾಗುತ್ತಿದೆ ಎಂದು ಪ್ರಾಂಶುಪಾಲರು ಹೇಳಿದರು.
Related Articles
Advertisement
ಶಾಲು, ಸ್ಕಾರ್ಫ್ ವಿವಾದ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಣೆಯಾಗಿದೆ. ನಗರದ ಖಾಸಗಿ ಕಾಲೇಜೊಂದರಲ್ಲಿ ನೂರಾರು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದಾಗ ಪ್ರವೇಶ ನಿರಾಕರಿಸಲಾಗಿದೆ. ಈ ಪರಿಸರದಲ್ಲಿ ಗುರುವಾರ ಒಂದೇ ದಿನ 700ರಷ್ಟು ಕೇಸರಿ ಶಾಲು ಮಾರಾಟವಾಗಿತ್ತು! ಕಾಳಾವರ, ನಾವುಂದ ಮೊದಲಾದೆಡೆಯೂ ಇಂತಹ ಪ್ರಯತ್ನ ನಡೆದಿದ್ದು ಎಲ್ಲೂ ಸ್ಕಾರ್ಫ್ ಹಾಗೂ ಶಾಲು ಧರಿಸಿ ಕಾಲೇಜಿಗೆ ಪ್ರವೇಶ ನೀಡಲಿಲ್ಲ.
ಸರಕಾರದ ನಿಯಮ ಎಲ್ಲರೂ ಪಾಲಿಸಬೇಕು: ಸಚಿವ ಅಂಗಾರ :
ಉಡುಪಿ: ಒಂದೊಂದು ಕಾಲೇಜಿಗೂ ಪ್ರತ್ಯೇಕ ನಿಯಮ ಇಲ್ಲ. ಸರಕಾರದ ನಿಯಮವನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಗುರುವಾರ ತಮ್ಮ ಕಚೇರಿ ಉದ್ಘಾ ಟನೆಯ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತಜ್ಞರ ಸಮಿತಿಯ ವರದಿಯನ್ನು ತರಿಸಿ ಕೊಳ್ಳಲಾಗುವುದು ಮತ್ತು ಜಿಲ್ಲಾಡಳಿತದೊಂದಿಗೂ ಚರ್ಚಿಸಲಿದ್ದೇನೆ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಒಂದೊಂದು ಶಾಲೆ ಅಥವಾ ಕಾಲೇಜಿಗೆ ಪ್ರತ್ಯೇಕ ನಿಯಮ ಇಲ್ಲ. ಸರಕಾರದ ನಿಯಮ ಮೀರಿ ವರ್ತಿಸುವವರಿಗೆ ಏನು ಕ್ರಮ ತೆಗೆದುಕೊಳ್ಳಬೇಕೋ ಅದು ಆಗಲಿದೆ. ಹಿಜಾಬ್ ಧರಿಸಿ ಬರುವುದು, ಅದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ಹೋಗುವುದು ಸರಿಯಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳಲಿದ್ದೇನೆ ಎಂದು ಹೇಳಿದರು.