ಸಕಲೇಶಪುರ: ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಬಹಿಷ್ಕಾರ ಹೇರಿದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.
ರಾಜ್ಯದಲ್ಲೆಡೆ ಪ್ರಮುಖ ಚರ್ಚಾ ವಿಷಯವಾಗಿರುವ ಕೇಸರಿ ಹಾಗೂ ಹಿಜಾಬ್ ವಿಷಯ ಮಲೆನಾಡಿಗೂ ಕಾಲಿಟ್ಟಿದ್ದು ಪಟ್ಟಣದ ಕುಡುಗರಹಳ್ಳಿ ಬಡಾವಣೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪೊಂದು ಕಾಲೇಜಿಗೆ ಕೇಸರಿ ಶಾಲು ಹಾಕಿಕೊಂಡು ಆಗಮಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಹರೀಶ್ ವಿದ್ಯಾರ್ಥಿಗಳ ವಿವರ ಪಡೆದು ಕಾಲೇಜಿನ ಒಳಗೆ ಬರುವುದಾದರೆ ಕೇಸರಿ ಶಲ್ಯ ಬಿಚ್ಚಿ ಬನ್ನಿ ಇಲ್ಲ ಕಾಲೇಜಿನ ಒಳಗೆ ಪ್ರವೇಶ ನೀಡುವುದಿಲ್ಲ ಎಂದರು.
ಇದನ್ನೂ ಓದಿ: ಉಡುಪಿ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಪೇಟ: ಉದ್ವಿಗ್ನ ವಾತಾವರಣ
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹಿಜಾಬ್ ಮಾತ್ರವಲ್ಲದೆ ಸಂಪೂರ್ಣವಾಗಿ ಬುರ್ಖಾವನ್ನು ಹಾಕಿಕೊಂಡು ಹಲವರು ಬರುತ್ತಿದ್ದಾರೆ. ಇದ್ಯಾವ ನ್ಯಾಯ ಅವರಿಗೊಂದು ನ್ಯಾಯ ನಮಗೊಂದು ನ್ಯಾಯವ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಚೈತನ್ಯ ಹಾಗೂ ನಗರ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ ಹಾಗೂ ಪೋಲಿಸ್ ಕೀರ್ತಿ ವಿದ್ಯಾರ್ಥಿಗಳನ್ನು ಸಮಾಧಾನಿಸಲು ಯತ್ನಿಸಿದರು. ಇಂದು ಹೈಕೋರ್ಟ್ ತೀರ್ಪು ಹೊರ ಬರಲಿದ್ದು ಸದ್ಯ ಶಲ್ಯ ತೆಗೆದು ತರಗತಿಗೆ ಹೋಗಿ, ಹೈಕೋರ್ಟ್ ತೀರ್ಪು ಬಂದ ನಂತರ ನಿಮ್ಮ ಹೋರಾಟದ ಬಗ್ಗೆ ತೀರ್ಮಾನಿಸಿ ಎಂದರು.
ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಬುರ್ಖಾಧಾರಿಗಳಿಗೆ ಅವಕಾಶ ಕೊಡುತ್ತಾರೆ ಅದೇ ರೀತಿ ನಮಗೂ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.