ಬೆಂಗಳೂರು : ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಕೆಲವು ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿರುವ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ) ಸದಸ್ಯರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಗುರುವಾರ ಹೈಕೋರ್ಟ್‌ಗೆ ತಿಳಿಸಿದೆ.
ಕೋರ್ಟ್ ಕಲಾಪ ಆರಂಭವಾದ ಕೂಡಲೇ ರಾಜ್ಯದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೈಕೋರ್ಟ್‌ನ ಪೂರ್ಣ ಪೀಠಕ್ಕೆ ತಿಳಿಸಿದರು. ಅವರು ಸಿಎಫ್‌ಐಗೆ ಸಂಬಂಧಿಸಿದ ವಿವರಗಳನ್ನು ಮುಚ್ಚಿದ ಕವರ್‌ನಲ್ಲಿ ಪೀಠಕ್ಕೆ ಒದಗಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ದೆಹಲಿಯಲ್ಲೂ ಹಿಜಾಬ್ ವಿವಾದ : ಸ್ಪಷ್ಟನೆ ನೀಡಿದ ಡಿಸಿಎಂ ಸಿಸೋಡಿಯಾ
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ, ನ್ಯಾಯಮೂರ್ತಿ ಜೆ ಎಂ ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ಪೂರ್ಣ ಪೀಠವು ಹಿಜಾಬ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.
ಸಂಘಟನೆಯೊಂದರ ವಿರುದ್ಧ ಹಿರಿಯ ವಕೀಲ ಎಸ್‌ಎಸ್ ನಾಗಾನಂದ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ನಾವದಗಿ ಪೀಠಕ್ಕೆ ತಿಳಿಸಿದರು.
ಬುಧವಾರ, ನ್ಯಾಯಾಲಯವು ಸಿಎಫ್‌ಐ ಪಾತ್ರವನ್ನು ರಾಜ್ಯ ಸರ್ಕಾರದಿಂದ ತಿಳಿಯಲು ಕೋರಿತ್ತು.ವಿಚಾರಣೆ ಮುಂದೂಡಲಾಗಿದೆ.