ಬೆಂಗಳೂರು: ಹಿಜಾಬ್ ವಿಚಾರದಲ್ಲಿ ಸ್ವಾಮೀಜಿಗಳ ಕುರಿತಾಗಿ ಹೇಳಿಕೆ ನೀಡಿದ್ದ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ಮುಂದುವರಿಸಿದ್ದು , ಟ್ವೀಟ್ ಗಳ ಮೂಲಕ ಟಾಂಗ್ ನೀಡಿದೆ.
”ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತಿದೆ ಸಿದ್ದರಾಮಯ್ಯ ಅವರ ಧೋರಣೆ.ಈ ಹಿಂದೆ ಹಲವು ಮಠಾಧೀಶರ ವಿರುದ್ಧ ಅಗೌರವಯುತವಾಗಿ ನಡೆದುಕೊಂಡಿದ್ದ ಸಿದ್ದರಾಮಯ್ಯ ಅವರು ಈಗ ಸ್ವಾಮೀಜಿಗಳ ಮೌನವನ್ನೂ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಹಿಂದೂ ವಿರೋಧಿ ಬುರುಡೆರಾಮಯ್ಯ” ಎಂದು ಟ್ವೀಟ್ ಮಾಡಿದೆ.
ಹೈಕೋರ್ಟ್ ತೀರ್ಪಿನ ಬಳಿಕ ಹಿಜಾಬ್ ವಿವಾದ ತಣ್ಣಗಾಗಿತ್ತು.ಆದರೆ ಹಿಜಾಬ್ ಧರಿಸಲು ಅವಕಾಶ ನೀಡಿ ಎಂದು ಸಿದ್ದರಾಮಯ್ಯ ಈಗ ಏಕಪಾತ್ರಾಭಿನಯ ಆರಂಭಿಸಿದ್ದಾರೆ.ಕೋಮು ಸೌಹಾರ್ದ ಎಂಬುದು ಈ ದೇಶದಲ್ಲಿ ಕನಸಾಗಿ ಉಳಿದಿರುವುದಕ್ಕೆ ಸಿದ್ದರಾಮಯ್ಯ ಅವರಂಥಹ ಅವಕಾಶವಾದಿ ರಾಜಕಾರಣಿಗಳೇ ಕಾರಣ ಎಂದು ಇನ್ನೊಂದು ಟ್ವೀಟ್ ನಲ್ಲಿ ಕುಟುಕಿದೆ.
ಬಿಎಸ್‌ವೈ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಠಮಂದಿರಗಳಿಗೆ ಉದಾರ ನೆರವು ನೀಡಿದ್ದರು.ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.ಸಂವಿಧಾನದ ಮುಂದೆ ಎಲ್ಲರೂ ಸಮಾನರು ಎಂದು ವಾದಿಸುವ ಸಿದ್ದರಾಮಯ್ಯನವರಿಗೆ ಹಿಂದುಗಳನ್ನು ವಿರೋಧಿಸಲು ಯಾವ ಕಾನೂನು ಅಡ್ಡಿ ಬರುವುದಿಲ್ಲ! ಎಂದು ಬರೆದಿದೆ.
ಸ್ವಾಮೀಜಿಗಳ ಶಿರವಸ್ತ್ರದ ಬಗ್ಗೆ ವ್ಯಂಗ್ಯವಾಡುವ ಸಿದ್ದರಾಮಯ್ಯ ಈ ಹಿಂದೆ ವೀರಶೈವ ಲಿಂಗಾಯತ ಸ್ವಾಮೀಜಿಗಳ ಹೆಸರನ್ನು ತಮ್ಮಮತ ರಾಜಕಾರಣಕ್ಕೆ ಬಳಸಿಕೊಳ್ಳುವ ವಿಫಲ ಯತ್ನ ನಡೆಸಿದ್ದರು.ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ಸ್ವಾಮೀಜಿಗಳೇ ಮನವಿ ನೀಡಿದ್ದರು ಎಂಬ ಸುಳ್ಳು ಹೇಳಿಕೆಯನ್ನು ರಾಜ್ಯದ ಜನ ಮರೆತಿಲ್ಲ”ಎಂದು ಇನ್ನೊಂದು ಟ್ವೀಟ್ ಮಾಡಿದೆ.