Advertisement

ಹೆದ್ದಾರಿ ಕಾಮಗಾರಿ ಅವಾಂತರ: ಬಸ್‌ ನಿಲ್ದಾಣಕ್ಕಿಲ್ಲ ನೇರ ಪ್ರವೇಶ

10:35 PM May 08, 2020 | Sriram |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಬದಲಾದ ವಿನ್ಯಾಸದ ಕಾಮಗಾರಿ ಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೋಗಲು ಸುತ್ತಿ ಬಳಸಿ ಬರಬೇಕಾಗಿದೆ.

Advertisement

ಶಾಸ್ತ್ರೀ ಸರ್ಕಲ್‌ ಬಳಿಯ ಫ್ಲೈಓವರ್‌ ಮುಕ್ತಾಯವಾಗುವುದು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಂದು ಪ್ರವೇಶ ದ್ವಾರದ ಬಳಿ. ಇಲ್ಲಿ ಹೆದ್ದಾರಿಗೆ ಸರ್ವಿಸ್‌ ರಸ್ತೆಯಿಂದ ಪ್ರವೇಶ -ನಿರ್ಗಮನ ಇಟ್ಟರೆ ಅನುಕೂಲಕ್ಕಿಂತ ಜಾಸ್ತಿ ಅನನುಕೂಲವಾಗಲಿದೆ. ಆದ್ದರಿಂದ ಇಲ್ಲಿ ಹೆದ್ದಾರಿಗೆ ಪ್ರವೇಶಕ್ಕೆ ಅವಕಾಶ ಕೊಡದೇ ಮುಚ್ಚಲಾಗಿದೆ.

ರಾಜ್ಯದ ವಿವಿಧೆಡೆಗೆ, ಹೊರರಾಜ್ಯಗಳಿಗೆ ಎಂದು ದಿನವೊಂದಕ್ಕೆ ಇನ್ನೂರಕ್ಕೂ ಅಧಿಕ ಬಸ್‌ಗಳು ಬಂದು ಹೋಗುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಉಡುಪಿ ಕಡೆಯಿಂದ ಆಗಮಿಸಬೇಕಾದ ಬಸ್‌ಗಳ ಪ್ರವೇಶವೇ ಕಷ್ಟವಾಗಲಿದೆ. ರಸ್ತೆ ವಿಭಜಕ ಹಾಕಿ ಪ್ರವೇಶ ನೀಡದೇ ಇದ್ದರೆ ಉಡುಪಿ ಕಡೆಯಿಂದ ಬರುವ ಬಸ್ಸುಗಳು ಸಂಗಂವರೆಗೆ ಹೋಗಿ ಸರ್ವಿಸ್‌ ರಸ್ತೆಗೆ ಬಂದು ಬಸ್‌ ನಿಲ್ದಾಣದ ಕಡೆಗೆ ಮರಳಿ ಬರಬೇಕು. ಅಂತೆಯೇ ಮತ್ತೆ ಬೈಂದೂರು, ಭಟ್ಕಳ ಕಡೆಗೆ ಹೋಗಬೇಕಾದರೆ ತಿರುಗಿ ಶಾಸ್ತ್ರೀ ಸರ್ಕಲ್‌ವರೆಗೆ ಬಂದು ಫ್ಲೈಓವರ್‌ ಅಡಿಯಲ್ಲಿ ಚಲಿಸಿ ಸರ್ವಿಸ್‌ ರಸ್ತೆ ಮೂಲಕ ಸಂಗಂ ಕಡೆಗೆ ಹೋಗಬೇಕು. ಇದು ಕೆಲವು ಕಿ.ಮೀ. ದೂರವಾಗಲಿದೆ. ಹಾಗೂ ಕನಿಷ್ಠ 20 ನಿಮಿಷ ಹೆಚ್ಚುವರಿಯಾಗಿ ತಗುಲಲಿದೆ. ಇಷ್ಟಲ್ಲದೇ ಸಂಗಂ ಬಳಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ.

ಓಪನಿಂಗ್‌ ಬೇಕು
ಬಸ್‌ ನಿಲ್ದಾಣದ ಬಳಿಯೇ ಪ್ರವೇಶಾ ವಕಾಶ ನೀಡಿದರೆ ಅಪಘಾತ ಉಂಟಾಗುವ ಸಾಧ್ಯತೆಯಿದ್ದರೆ ಎಪಿಎಂಸಿ ಬಳಿಯಾದರೂ ನೀಡಬಹುದು. ಈಗಾಗಲೇ ಎಪಿಎಂಸಿ ಹಾಗೂ ಬಸ್‌ ನಿಲ್ದಾಣದ ನಡುವಿನ 50 ಮೀ.ನಷ್ಟು ಜಾಗ ಸರ್ವಿಸ್‌ ರಸ್ತೆಯೇ ಆಗದೇ ಬಾಕಿಯಿದ್ದುದು ಕಾಮಗಾರಿ ಆರಂಭ ವಾಗಿದೆ. ಈ 10 ವರ್ಷಗಳಲ್ಲಿ ಇದಿಷ್ಟು ಜಾಗಕ್ಕೆ ನೋಟಿಫಿಕೇಶನ್‌ ಕೂಡ ಆಗಿರಲಿಲ್ಲ. ಜನವರಿಯಲ್ಲಷ್ಟೇ ಭೂಸ್ವಾಧೀನಕ್ಕೆ ಪ್ರಕಟನೆ ಹೊರಡಿಸಲಾಗಿದೆ. ಈ ಜಾಗದಲ್ಲಾದರೂ ಬಸ್‌ಗಳು ನಿಲ್ದಾಣಕ್ಕೆ ಹೋಗಲು ಅನುವಾಗುವಂತೆ ಅವಕಾಶ ನೀಡಿದರೆ ವೃಥಾ ಸುತ್ತಾಟ ತಪ್ಪಲಿದೆ.

ಕಾಮಗಾರಿ ಆರಂಭ
ಲಾಕ್‌ಡೌನ್‌ ಪ್ರಯುಕ್ತ ಕೆಲವು ದಿನಗಳ ಕಾಲ ಸ್ಥಗಿತವಾಗಿದ್ದ ಹೆದ್ದಾರಿ ಕಾಮಗಾರಿ ಈಗ ನಡೆಯುತ್ತಿದೆ. ಮಳೆ ಬರುವ ಮೊದಲೇ ಪ್ರಮುಖ ಸ್ಥಳಗಳ ಕೆಲಸ ಮುಗಿದರೆ ಸಮಸ್ಯೆಯಾಗದು.

Advertisement

ಪ್ರವೇಶ ನೀಡಬೇಕು
ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಪ್ರವೇಶ, ನಿರ್ಗಮನಕ್ಕೆ ಹೆದ್ದಾರಿಯಿಂದ ಅವಕಾಶ ನೀಡಬೇಕು. ಇಲ್ಲದೇ ಇದ್ದರೆ ಬಸ್‌ಗಳ ಸಂಚಾರದಲ್ಲಿ ಅನಗತ್ಯ ವ್ಯತ್ಯಯವಾಗುತ್ತದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ, ಗುತ್ತಿಗೆದಾರರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಗಮನ ಹರಿಸಬೇಕು.
-ಕೆಂಚನೂರು ಸೋಮಶೇಖರ ಶೆಟ್ಟಿ,
ಹೆದ್ದಾರಿ ಹೋರಾಟ ಸಮಿತಿ ಪ್ರಮುಖರು

ಮನವಿ ಬಂದಿಲ್ಲ
ಹೆಮ್ಮಾಡಿಯಲ್ಲಿ ಇಂತದ್ದೇ ಒಂದು ಬೇಡಿಕೆ ಸಾರ್ವಜನಿಕರಿಂದ ಬಂದಾಗ ನಾವು ಮನವಿ ಮಾಡಿದ್ದನ್ನು ಅಪಘಾತ ತಾಣವಾಗುತ್ತದೆ, ಮೂಲ ವಿನ್ಯಾಸದಲ್ಲಿ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರ ಒಪ್ಪಿರಲಿಲ್ಲ. ಕೆಎಸ್‌ಆರ್‌ಟಿಸಿ ನಿಲ್ದಾಣದ ಪ್ರವೇಶ ಕುರಿತು ಯಾರಿಂದಲೂ ಈವರೆಗೆ ಬೇಡಿಕೆ ಬಂದಿಲ್ಲ. ಅಪಘಾತ ತಾಣವಾಗುವ ಸಾಧ್ಯತೆಯಿಲ್ಲದಿದ್ದರೆ ಪೊಲೀಸ್‌ ಇಲಾಖೆಯಿಂದ ಆಕ್ಷೇಪವಿಲ್ಲ.
ಹರಿರಾಮ್‌ ಶಂಕರ್‌,
ಎಎಸ್‌ಪಿ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next