ಚಿಂಚೋಳಿ: ಕಳೆದ ಒಂದು ದಶಕಗಳಿಂದ ನನೆಗುದಿಗೆ ಬಿದ್ದಿರುವ ಚಿಂಚೋಳಿ-ಬೀದರ ಹೆದ್ದಾರಿ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿ ಅತಿ ಚುರುಕಿನಿಂದ ನಡೆಯುತ್ತಿದ್ದು, ಇನ್ನು ಮುಂದೆ ವಾಹನಗಳ ಸುಗಮ ಸಂಚಾರಕ್ಕೆ ಬಹಳಷ್ಟು ಅನುಕೂಲವಾಗಲಿದೆ.
ಬೀದರ ಜಿಲ್ಲಾ ಕೇಂದ್ರದ ಚಿದ್ರಿಯಿಂದ ಚಿಂಚೋಳಿ ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ ಪ್ರತಿಮೆವರೆಗೆ ಒಟ್ಟು 60 ಕಿಮೀ ರಸ್ತೆ ಡಾಂಬರೀಕರಣಗೊಳ್ಳುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ದಿ ನಿಗಮದಿಂದ ಒಟ್ಟು 227 ಕೋಟಿ ರೂ. ಮಂಜೂರಿಗೊಳಿಸಲಾಗಿದ್ದು, ಈ ಕಾಮಗಾರಿಯನ್ನು ಗುಜರಾತ ರಾಜ್ಯದ ಖಾಸಗಿ ಡಿಪಿ ಜೈನ್ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.
ಈಗಾಗಲೇ ಐನೋಳಿ, ದೇಗಲಮಡಿ, ಫತ್ತೆಪುರ, ಕೊಳ್ಳುರ, ನಾಗಾಇದಲಾಯಿ, ತುಮಕುಂಟಾ ಗ್ರಾಮಗಳ ವರೆಗೆ ಒಟ್ಟು 25 ಕಿಮೀ ವರೆಗೆ ಒಂದು ಭಾಗದ ಡಾಂಬರೀಕರಣಗೊಂಡಿದೆ. ತೆಲಂಗಾಣ ರಾಜ್ಯದ ಮಹೆಬೂಬನಗರ ಜಿಲ್ಲೆಯ ಎನ್ ಎಚ್ 4ರಿಂದ ಮನ್ನಾಎಕ್ಕೆಳ್ಳಿ ರಾಷ್ಟ್ರೀಯ ಹೆದ್ದಾರಿ 9ಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮುಖ್ಯ ಉದ್ದೇಶವಾಗಿದೆ. ಒಟ್ಟು 30 ಮೀಟರ್ ಅಗಲವುಳ್ಳ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ರಸ್ತೆಯಿಂದ ಬೀದರ ನಗರದಿಂದ ಕಮಠಾಣ, ಮರ್ಜಾಪುರ, ಕಾಡವಾದ, ಬಗದಲ್, ಮನ್ನಾಎಕ್ಕೆಳ್ಳಿ, ವಿಠಲಪುರ, ಚಾಂಗಲೇರಾ, ತುಮಕುಂಟಾ, ನಾಗಾಇದಲಾಯಿ, ಕೊಳ್ಳುರ, ಫತ್ತೆಪುರ, ದೇಗಲಮಡಿ, ಐನೋಳಿ, ಚಿಂಚೋಳಿ ಒಟ್ಟು 60 ಕಿಮೀ ರಸ್ತೆ ಅಭಿವೃದ್ಧಿ ನಡೆಯುತ್ತಿದೆ.
ಚಿಂಚೋಳಿ-ಐನೋಳಿ ರಸ್ತೆ ಬದಿಯಲ್ಲಿ ಬರುವ ಮರಗಳನ್ನು ಕಡಿಯದಂತೆ ವನ್ಯಜೀವಿಧಾಮ ಪರವಾನಗಿ ನೀಡದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ ಒಂದು ವರ್ಷದಿಂದ ನನೆಗುದಿಗೆ ಬಿದ್ದಿತ್ತು. ರಾಜ್ಯ ಅರಣ್ಯ ಇಲಾಖೆಯಿಂದ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳನ್ನು ಕಡಿದು ಹಾಕಲು ಅನುಮತಿ ಕೊಟ್ಟಿದ್ದರಿಂದ ಈಗ ರಸ್ತೆ ಸುಧಾರಣೆ ಚುರುಕಿನಿಂದ ನಡೆಯುತ್ತಿದೆ. ಅದರಂತೆ ಚಿಂಚೋಳಿ-ಬೀದರ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಬರುವ ಜಮೀನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೀದರ-ಚಿಂಚೋಳಿ ಮಾರ್ಗವಾಗಿ ಎನ್‌ಎಚ್4ಕ್ಕೆ ಸಂಪರ್ಕ ಕಲ್ಪಿಸುವುದರಿಂದ ಬೆಂಗಳೂರು ನಗರಕ್ಕೆ ಅತಿ ಕಡಿಮೆ 570 ಕಿಮೀ ಕಡಿಮೆ ಆಗುವುದರಿಂದ ಬೀದರ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನ ಆಗಲಿದೆ. ಅಲ್ಲದೇ ತಾಂಡೂರ, ಚಿಂಚೋಳಿ ಗಡಿಯಲ್ಲಿ ಇರುವ ಚೆಟ್ಟಿನಾಡ, ಕಲಬುರಗಿ ಸಿಮೆಂಟ್, ಕೋರಮಂಡಲ, ಐಸಿಸಿ ಕಂಪನಿಗಳಿಂದ ಸಿಮೆಂಟ್ ತುಂಬಿದ ಲಾರಿಗಳ ಓಡಾಟಕ್ಕೆ ಅನುಕೂಲವಾಗಲಿದೆ. ಟೆಂಡರ್ ಅವಧಿ ಪ್ರಕಾರ 2019 ಅಗಸ್ಟ್‌ನೊಳಗೆ ರಸ್ತೆ ಡಾಂಬರೀಕರಣಗೊಳಿಸಬೇಕಾಗಿದೆ ಎಂದು ಕೆಆರ್‌ಡಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಗದೀಶ ಸೊಂಡೂರ ತಿಳಿಸಿದ್ದಾರೆ.
ಚಿಂಚೋಳಿ-ಬೀದರ ರಸ್ತೆ ಸುಧಾರಣಗೊಳಿಸಬೇಕು. ಸುತ್ತಲಿನ ಗ್ರಾಮಗಳ ಪ್ರಯಾಣಿಕರಿಗೆ ರಸ್ತೆ ಸಂಪರ್ಕ ಒದಗಿಸಿಕೊಡಬೇಕು ಎಂಬುದು ನನ್ನ ಗಮನಕ್ಕೆ ಬಂದಿರುವುದರಿಂದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಲ್ಲಿನ ಹದಗೆಟ್ಟಿರುವ ರಸ್ತೆ ವಿಚಾರ ಗಮನಕ್ಕೆ ತಂದಾಗ ರಸ್ತೆ ಅಭಿವೃದ್ಧಿಗೆ ಹಣ ಮಂಜೂರಿಗೊಳಿಸಿದ್ದರು. ಈಗ ರಸ್ತೆ ಪ್ರಗತಿ ನಡೆಯುತ್ತಿದೆ. ಇದು ಐತಿಹಾಸಿಕ ಸಾಧನೆ ಆಗಿದೆ ಎಂದು ಶಾಸಕ ಡಾ|ಉಮೇಶ ಜಾಧವ ತಿಳಿಸಿದ್ದಾರೆ.