Advertisement

ಕಡಿಯಲಷ್ಟೇ ಉತ್ಸಾಹ, ಬೆಳೆಸಲು ನಾನಾ ಸಬೂಬು !

10:52 PM Mar 01, 2021 | Team Udayavani |

ಕುಂದಾಪುರ/ಬೈಂದೂರು: ಕಡಿದದ್ದು ಸಾಗರದಷ್ಟು; ಬೆಳೆಸಿದ್ದು ಮಾತ್ರ ಕೇವಲ ಸಾಸಿವೆಯಷ್ಟು.. ಈ ಮಾತು ಅಕ್ಷರಶಃ ಅನ್ವಯವಾಗುವುದು ಕುಂದಾಪುರದಿಂದ ಶಿರೂರುವರೆಗಿನ ರಸ್ತೆ ಅಗಲಗೊಳಿಸುವಾಗ ಆದ ಪರಿಸರ ನಷ್ಟಕ್ಕೆ. ಹೆದ್ದಾರಿ ಅಭಿವೃದ್ಧಿಗಾಗಿ ಸಾವಿರಾರು ಬೃಹತ್‌ ಮರಗಳನ್ನು ಕಡಿಯಲಾಯಿತು. ಪರ್ಯಾಯವಾಗಿ ಕೆಲವು ಕಿ.ಮೀ ವ್ಯಾಪ್ತಿಯಲ್ಲಿ ಕೆಲವು ಗಿಡಗಳನ್ನು ನೆಡಲಾಗಿದೆ.

Advertisement

ಬೆಳೆಸಿದ್ದು ಶೇ.19 ರಷ್ಟು ಮಾತ್ರ
ಚತುಷ್ಪಥ ಕಾಮಗಾರಿ ಆರಂಭಗೊಳ್ಳುವ ಮೊದಲು ಈ ರಸ್ತೆಯು ಮರ-ಗಿಡಗಳಿಂದ ಅಚ್ಚ ಹಸಿರಾಗಿ ಕಂಗೊಳಿಸುತ್ತಿತ್ತು. ಆದರೆ ಹೆದ್ದಾರಿಯ ಅಭಿವೃದ್ಧಿಗೆ ಬರೋಬ್ಬರಿ 9,309 ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪರ್ಯಾಯವಾಗಿ ತಲ್ಲೂರಿನಿಂದ ಆರಂಭಗೊಂಡು ಅರಾಟೆಯವರೆಗಿನ 3 ಕಿ.ಮೀ.ವರೆಗೆ 900 ಗಿಡ ಹಾಗೂ ಮುಳ್ಳಿಕಟ್ಟೆಯಿಂದ ತ್ರಾಸಿವರೆಗಿನ ಇಕ್ಕೆಲಗಳಲ್ಲಿ ಒಟ್ಟು 3 ಕಿ.ಮೀ. ವ್ಯಾಪ್ತಿಯಲ್ಲಿ 900 ಸೇರಿದಂತೆ ಒಟ್ಟು 6 ಕಿ.ಮೀ. ವಿಸ್ತೀರ್ಣದಲ್ಲಿ 1,800 ಗಿಡಗಳನ್ನು ನೆಡಲಾಗಿದೆ. ಅಂದರೆ ಕಡಿದ ಮರಗಳಿಗೆ ಬದಲಿಯಾಗಿ ಶೇ.19.33 ರಷ್ಟು ಮಾತ್ರ ನೆಟ್ಟಿದ್ದಾರೆ.

ಕಾಮಗಾರಿಗಾಗಿ ಒಟ್ಟಾರೆ 12.76 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗುತ್ತಿಗೆ ನೀಡಲಾಗಿದೆ. ಇದರಲ್ಲಿ 1.81 ಹೆಕ್ಟೇರ್‌ ಮ್ಯಾಂಗ್ರೋ ಕಾಡು ಕೂಡ ಸೇರಿದೆ. ಒಟ್ಟಾರೆ ಕುಂದಾಪುರದಿಂದ ಹೊನ್ನಾವರ – ಕಾರವಾರದವರೆಗಿನ 189.6 ಕಿ.ಮೀ. ಉದ್ದದ ಚತುಷ್ಪಥ ರಸ್ತೆ ಕಾಮಗಾರಿಗೆ ಒಟ್ಟಾರೆ 159 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬಿಟ್ಟುಕೊಡಲಾಗಿದೆ.

ಹೆಕ್ಟೇರ್‌ಗೆ 3 ಲಕ್ಷ ರೂ.
ಕುಂದಾಪುರ-ಶಿರೂರು ವರೆಗಿನ ವ್ಯಾಪ್ತಿಯಲ್ಲಿ ಬಿಟ್ಟುಕೊಟ್ಟ ಅರಣ್ಯ ಪ್ರದೇಶಕ್ಕೆ ಹೆದ್ದಾರಿ ಪ್ರಾಧಿಕಾರವು ಅರಣ್ಯ ಇಲಾಖೆಗೆ ನೆಡುತೋಪು ಅಥವಾ ಹೆದ್ದಾರಿ ಹಸುರೀಕರಣಕ್ಕಾಗಿ 76.56 ಲಕ್ಷ ರೂ. ನೀಡಬೇಕಿದೆ. 12 ಹೆಕ್ಟೇರ್‌ ಅರಣ್ಯ ಪ್ರದೇಶಕ್ಕೆ ದುಪ್ಪಟ್ಟು ಅಂದರೆ ಸುಮಾರು 25 ಹೆಕ್ಟೇರ್‌ ಪ್ರದೇಶವನ್ನು ಬೆಳೆಸುವ ಗುರಿಯಿದ್ದು, ಅದಕ್ಕಾಗಿ ಹೆಕ್ಟೇರ್‌ಗೆ 3 ಲಕ್ಷ ರೂ. ವಿನಿಯೋಗಿಸಲು ನಿರ್ಧರಿಸಲಾಗಿದೆ.

Advertisement

ತುಮಕೂರಿನಲ್ಲಿ 320 ಹೆ. ಅಭಿವೃದ್ಧಿ ?
ಕುಂದಾಪುರ- ಕಾರವಾರದವರೆಗಿನ ಕಾಮಗಾರಿಗೆ ಕರಾವಳಿಯಲ್ಲಿ ಅರಣ್ಯ ಕಳೆದುಕೊಂಡರೆ ತುಮಕೂರಿನಲ್ಲಿ ಅರಣ್ಯ ಅಭಿವೃದ್ಧಿ ಪಡಿಸಲಾಗುತ್ತದಂತೆ. ಇದು ವಿಚಿತ್ರವೆಂದರೂ ಸತ್ಯ. ಈ ಕಾಮಗಾರಿಗೆ 159 ಹೆಕ್ಟೇರ್‌ ಅರಣ್ಯ ಬಿಟ್ಟುಕೊಟ್ಟದ್ದಕ್ಕೆ ಪರ್ಯಾಯವಾಗಿ ಕಾಡು ಬೆಳೆಸಲು ಕರಾವಳಿಯಲ್ಲಿ ಜಾಗವಿಲ್ಲವಂತೆ. ಹಾಗಾಗಿ ತುಮಕೂರಿನಲ್ಲಿ 320 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬೆಳೆಸಲಾಗುತ್ತದೆಯಂತೆ. ಆದರೆ ಇದರಿಂದ ಕರಾವಳಿಯಲ್ಲಿ ಕಡಿದ ಮರಗಳಿಗೆ ಪರಿಹಾರ ಸಿಕ್ಕಂತಾಗುತ್ತದೆಯೇ ಎಂಬುದು ಸ್ಥಳೀಯರ ಪ್ರಶ್ನೆ.

ಅನುದಾನವೇ ಬಂದಿಲ್ಲ…
ಸರಕಾರ, ಪ್ರಾಧಿಕಾರಕ್ಕೆ ಅಭಿವೃದ್ಧಿ ಬಗ್ಗೆ ಇರುವ ಕಾಳಜಿ ಪರಿಸರ ಸಂರಕ್ಷಣೆ ಬಗ್ಗೆ ಇಲ್ಲ ಅನ್ನುವುದಕ್ಕೆ ಇದೊಂದೇ ನಿದರ್ಶನ ಸಾಕು. ಕಾಮಗಾರಿಗಾಗಿ ಕೋಟಿ- ಕೋಟಿ ರೂ. ಬಿಡುಗಡೆ ಮಾಡುವ ಇವರು, ಗಿಡ ನೆಡಲು, ಅರಣ್ಯ ಬೆಳೆಸಲು ಅನುದಾನ ಬಿಡುಗಡೆಗೆ ಮೀನಾಮೇಷ ಎಣಿಸುತ್ತಿದ್ದಾರೆ. ಕುಂದಾಪುರದಿಂದ ತ್ರಾಸಿಯವರೆಗೆ ಒಟ್ಟು 6 ಕಿ.ಮೀ.ವ್ಯಾಪ್ತಿಯಲ್ಲಿ ಒಟ್ಟು 1,800 ಗಿಡಗಳನ್ನು ಹೆದ್ದಾರಿಯ ಇಕ್ಕೆಲಗಳಲ್ಲಿ ನೆಡಲಾಗಿದೆ. ಆದರೆ ತ್ರಾಸಿಯಿಂದ ಶಿರೂರುವರೆಗೆ ಒಂದೇ ಒಂದೇ ಗಿಡವನ್ನೂ ನೆಟ್ಟಿಲ್ಲ. ಇದಕ್ಕೆ ಅಧಿಕಾರಿಗಳ ಬಳಿ ಕಾರಣ ಕೇಳಿದರೆ ಅನುದಾನವೇ ಬಂದಿಲ್ಲ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next