ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಮುಖ್ಯ ಜಂಕ್ಷನ್‌ನಲ್ಲಿ ಎರಡೂ ಭಾಗಗಳಲ್ಲಿ ಚರಂಡಿ ಇಲ್ಲದೇ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಹಳೆಯಂಗಡಿ ಜಂಕ್ಷನ್‌ನಲ್ಲಿ ಚತುಷ್ಪಥ ಕಾಮಗಾರಿಯ ಯೋಜನೆ ಯಂತೆ ಸರ್ವಿಸ್ ರಸ್ತೆ ನಿರ್ಮಿಸ ಬೇಕಿದೆ. ಆದರೆ ಮುಖ್ಯಪೇಟೆಯಲ್ಲಿ ರಸ್ತೆ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿರುವ ಸಂಸ್ಥೆಯು ಇಲ್ಲಿ ಚರಂಡಿ ನಿರ್ಮಿಸಿಲ್ಲ. ಇದರಿಂದ
ಮಳೆ ನೀರು ಹೆದ್ದಾರಿ ಬದಿಯಲ್ಲಿ ನಿಲ್ಲುತ್ತಿದೆ.
ಇದರಿಂದಾಗಿ ಹಳೆಯಂಗಡಿ ಯಿಂದ ಮಂಗಳೂರಿಗೆ ತೆರಳುವ ಬಸ್ ಪ್ರಯಾಣಿಕರಿಗೆ ಬಸ್ ಹತ್ತುವುದು, ಇಳಿಯುವುದು ಸಮಸ್ಯೆಯಾಗಿದೆ. ಬಸ್‌ಗಾಗಿ ರಸ್ತೆ ಬದಿ ಕಾಯುತ್ತಿರುವ ವೇಳೆ ಕೆಲವೊಂದು ಬಾರಿ ವೇಗವಾಗಿ ಬರುವ ವಾಹನಗಳು ರಸ್ತೆ ಬಂದಿ ನಿಂತಿರುವವರ ಮೇಲೆ ಕೆಸರು ನೀರೆರಚಿ ಹೋಗುತ್ತವೆ.
ಸ್ಥಳೀಯ ಶ್ರೀ ವಿದ್ಯಾವಿನಾಯಕ ಯುವಕ ಮಂಡಲವು ಶ್ರಮದಾನದ ಮೂಲಕ ಹೆದ್ದಾರಿಯ ಬದಿಯಲ್ಲಿ ಬಸ್ ಪ್ರಯಾಣಿಕರಿಗಾಗಿ ತಾತ್ಕಾಲಿಕವಾದ ತಂಗುದಾಣವೊಂದನ್ನು ನಿರ್ಮಿಸಿ ದ್ದರೂ, ಅದರ ಸುತ್ತಮುತ್ತ ಮಳೆ ನೀರು ನಿಲ್ಲುವುದರಿಂದ ಬಸ್ ನಿಲ್ದಾಣದ ಆಸರೆ ಪ್ರಯಾಣಿಕರಿಗೆ ಸಿಗುತ್ತಿಲ್ಲ.
ಈ ಬಗ್ಗೆ ಬಸ್ ಟೈಮ್ ಕೀಪರ್ ಹರೀಶ್ ಕಟೀಲು ಪ್ರತಿಕ್ರಿಯಿಸಿ, ಪ್ರಯಾಣಿಕರಿಗಾಗಿ ಸಂಘವೊಂದು ಸುಂದರವಾಗಿ ಬಸ್ ತಂಗುದಾಣವನ್ನು ನಿರ್ಮಿಸಿದ್ದು ಕಳೆದ ಬಿಸಿಲಿನಲ್ಲಿ ಬಹಳಷ್ಟು ಉಪಕಾರ ಆಗಿದೆ ಆದರೆ, ಮಳೆಯ ಸಮಯದಲ್ಲಿ ರಕ್ಷಣೆ ಸಿಕ್ಕರೂ ಸೂಕ್ತವಾದ ಚರಂಡಿಗಳಿಲ್ಲದೇ ರಸ್ತೆ ಬದಿ ಹರಿಯುವ ಕೆಸರು ನೀರು ತಂಗುದಾಣದಲ್ಲಿದ್ದವರ ಮೇಲೆಯೇ ಹಾರುತ್ತಿದೆ. ಕೆಸರು ಮಿಶ್ರಿತ ರಸ್ತೆಯಲ್ಲಿಯೇ ಬಸ್‌ಗಳು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ.
ಈ ಬಗ್ಗೆ ಕೂಡಲೇ ಹೆದ್ದಾರಿ ಇಲಾಖೆ ಹಾಗೂ ನವಯುಗ್ ಸಂಸ್ಥೆಯು ಕ್ರಮ ಕೈಗೊಂಡು ಪಕ್ಕದಲ್ಲಿಯೇ ತಾತ್ಕಾಲಿಕವಾದರೂ ಚರಂಡಿಯನ್ನು ನಿರ್ಮಿಸಿ ಮಳೆ ನೀರು ನಿಲ್ಲಲು ಅವಕಾಶ ನೀಡದೆ, ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.